ಮುಂಬೈ ಕರಾವಳಿಯನ್ನು ಶುಕ್ರವಾರ ಶತಮಾನದ ದೈತ್ಯ ಅಲೆ ಅಪ್ಪಳಿಸಲಿದ್ದು, ಅಲ್ಲಿನ ಜನ ಇದನ್ನು ಕಾಣಲು ಕಾತರರಾಗಿದ್ದಾರೆ. ಶುಕ್ರವಾರ 5.1 ಮೀಟರ್ ಎತ್ತರದ ಅಲೆಗಳು ಮಧ್ಯಾಹ್ನ ಅಂದಾಜು 1.23ರ ವೇಳೆ ಅಪ್ಪಳಿಸಲಿದ್ದು, ಇದು ಸಾಯಂಕಾಲ 7.25ರ ತನಕ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತಿ ಎತ್ತರದ ಅಲೆಗಳು ಅಪ್ಪಳಿಸುವ ಕಾರಣ ಭಾರೀ ಮಳೆ ಸುರಿಯಲಿದ್ದು ದೊಡ್ಡ ಮಟ್ಟದ ಪ್ರವಾಹ ಸ್ಥಿತಿ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಭೀತಿ ವ್ಯಕ್ತಪಡಿಸಿದೆ. ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೋರೇಶನ್‌ನ ವಿಪತ್ತು ನಿರ್ವಹಣಾ ವಿಭಾಗವು ಎಲ್ಲಾ ಸಂಭಾವ್ಯ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧತೆ ನಡೆಸಿದೆ.
ನಗರಾದ್ಯಂತ ಸಾಧಾರಣ ಮಳೆಸುರಿಯುತ್ತಿದ್ದು, ಕೊಲಬಾ ಸ್ಟೇಶನ್‌ನಲ್ಲಿ 20.4 ಮಿಲಿಮೀಟರ್ ಮಳೆಯಾಗಿದೆ. ಸಾಂತಾಕ್ರೂಸ್‌ನಲ್ಲಿ 35.9 ಮಿಲಿಮೀಟರ್ ಮಳೆ ದಾಖಲಾಗಿದೆ. 2005ರ ಜುಲೈ 26ರ ವಿಪತ್ತಿನಲ್ಲಿ 4.48 ಮೀಟರ್ ಪ್ರವಾಹ ಉಂಟಾಗಿದ್ದು 944 ಮಿಲಿಮೀಟರ್ ಮಳೆಯಾಗಿತ್ತು. ಸುಮಾರು ಸಾವಿರ ಮಂದಿ ಸಾವನ್ನಪ್ಪಿದ್ದು, 15 ಸಾವಿರ ಕೋಟಿ ರೂಪಾಯಿಯಷ್ಟು ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿತ್ತು.
ಆದರೆ ಈ ಬಾರಿ ಚಿಂತಿಸುವ ಅವಶ್ಯಕತೆ ಇಲ್ಲ ಎಂದಿರುವ ಮುನಿಸಿಪಲ್ ಮುಖ್ಯಸ್ಥ ಜೈರಾಜ್ ಪಾಟಕ್, ಪೌರ ಪ್ರಾಧಿಕಾರವು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು ನಾಗರೀಕರು ಹೆಚ್ಚಿನ ಕಷ್ಟ ಅನುಭವಿಸುವಂತಾಗದು ಎಂದು ಅವರು ಹೇಳಿದ್ದಾರೆ. |