ಕಾಲೇಜು ಕ್ಯಾಂಪಸ್ಸಿನಲ್ಲೇ ಎಬಿವಿಪಿ ಕಾರ್ಯಕರ್ತರ ಚೂರಿ ಇರಿತಕ್ಕೀಡಾಗಿ ಸಾವನ್ನಪ್ಪಿದ್ದ ಉಜ್ಜೈನಿ ಕಾಲೇಜಿನ ಉಪನ್ಯಾಸಕ ಪ್ರೊ| ಸಭರ್ವಾಲ್ ಅವರ ಪುತ್ರ ಹಿಮಾಂಶು ಸಭರ್ವಾಲ್ ಅವರ ಸಹಾಯಕನ್ನು ಕೊಲೆ ಮಾಡಲಾಗಿದ್ದು ಪ್ರಕರಣಕ್ಕೆ ಹೊಸ ತಿರುವುಂಟಾಗಿದೆ.
ಸಭರ್ವಾಲ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನೂ ನ್ಯಾಯಾಲಯ ಇತ್ತೀಚೆಗೆ ಸಾಕ್ಷಾಧ್ಯಾರದ ಕೊರತೆಯ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿತ್ತು. ಇದರ ವಿರುದ್ಧ ತಾನು ಮೇಲ್ಮನವಿ ಸಲ್ಲಿಸುವುದಾಗಿ ಹಿಮಾಂಶು ಸಭರ್ವಾಲ್ ಹೇಳಿದ್ದರು.
ಇದೀಗ ಹಿಮಾಂಶು ಸಹಾಯಕ ಪರ್ಮೀಂದರ್ ಅವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ. ದೆಹಲಿ ವಿಶ್ವವಿದ್ಯಾನಿಲಯದ ಉತ್ತರದ ಕ್ಯಾಂಪಸ್ಸಿನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಹಿಮಾಂಶು ಹಾಗೂ ಪರ್ಮೀಂದರ್ ಅವರುಗಳು ಕ್ಯಾಂಪಸ್ಸಿನಲ್ಲಿ ಭಿತ್ತಿಪತ್ರಗಳನ್ನು ಅಂಟಿಸುತ್ತಿದ್ದ ವೇಳೆ ಈ ದುಷ್ಕೃತ್ಯ ನಡೆಸಲಾಗಿದೆ. ಪ್ರೊ ಸಭರ್ವಾಲ್ ಕೊಲೆ ಅಪರಾಧಿಗಳ ಖುಲಾಸೆಯನ್ನು ಪ್ರತಿಭಟಿಸಿ ಇಂಡಿಯಾ ಗೇಟಿನಲ್ಲಿ ಭಾನುವಾರ ಸಾಯಂಕಾಲ ಕ್ಯಾಂಡಲ್ ಲೈಟ್ ಮಾರ್ಚ್ ಹಮ್ಮಿಕೊಂಡಿದ್ದು ಈ ಕುರಿತ ಭಿತ್ತಿಪತ್ರ ಅಂಟಿಸುತ್ತಿದ್ದರು.
ಈ ಕುರಿತು ಶುಕ್ರವಾರ ಮುಂಜಾನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಲು ಹಿಮಾಂಶು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಜ್ಜೈನಿಯ ಮಾಧವ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಸಭರ್ವಾಲ್ ಅವರು 2006ರ ಆಗಸ್ಟ್ 26ರಂದು ಹತ್ಯೆಯಾಗಿದ್ದರು. ಕಾಲೇಜು ಪದಾಧಿಕಾರಿಗಳ ಸಂಘಟನೆಯ ಚುನಾವಣೆಯನ್ನು ಮುಂದೂಡಿರುವುದಕ್ಕೆ ವ್ಯಗ್ರರಾಗಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಚುನಾವಣಾ ಮುಂದೂಡಿಕೆಯ ಕಾರಣಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಅವರು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. |