ಮಹಿಳೆಯೊಬ್ಬಳ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಆಕೆಯನ್ನು ಅಮಾನುಷವಾಗಿ ಥಳಿಸಿದ ಘಟನೆಯ ಕುರಿತು ತನಿಖೆ ನಡೆಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ನೀಡಿದ್ದಾರೆ. ಈ ಕುರಿತು ವಿರೋಧ ಪಕ್ಷಗಳು ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತರು ಗಲಾಟೆ ಎಬ್ಬಿಸಿದ ಬಳಿಕ ಮುಖ್ಯಮಂತ್ರಿಗಳು ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ.
ಪಾಟ್ನಾದಲ್ಲಿ ಗುರುವಾರ ಸಾಯಂಕಾಲ ಪುರುಷರ ಗುಂಪೊಂದು 20ರ ಹರೆಯದ ಯುವತಿಯೊಬ್ಬಳ ಮೇಲೆ ಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರೆದುರೇ ಹಲ್ಲೆ ನಡೆಸಿ ಛಡಿಯೇಟು ನೀಡಿದ್ದರು. ಈ ವೇಳೆ ಪೊಲೀಸರ ತಂಡವೊಂದು ಘಟನಾ ಸ್ಥಳದಲ್ಲೇ ಇದ್ದರೂ, ಸುಮಾರು ಒಂದು ಗಂಟೆಗಳ ಕಾಲದ ಈ ದೌರ್ಜನ್ಯವನ್ನು ವೀಕ್ಷೀಸುತ್ತಾ ಇದ್ದರೇ ವಿನಹ ಮಹಿಳೆಯ ರಕ್ಷಣೆಗೆ ಮುಂದಾಗಿಲ್ಲ ಎಂದು ಆಪಾದಿಸಲಾಗಿದೆ.
ಪ್ರದೇಶದ ಗಸ್ತು ಉಸ್ತುವಾರಿ ವಹಿಸಿದ್ದ ಎಸ್ಐ ಶಿವ ನಾಥ್ ಸಿಂಗ್ ಅವರನ್ನು ಅಮಾನತ್ತು ಗೊಳಿಸಿರುವುದಾಗಿ ಎಡಿಜಿಪಿ ನೀಲಮನ್ ಹೇಳಿದ್ದಾರೆ.
ಈ ತರುಣಿಯ ಪಕ್ಕದ ಜಾರ್ಖಂಡಿನ ಜೆಸಿದ್ ನಿವಾಸಿಯಾಗಿದ್ದಾಳೆ. ಇಲ್ಲಿನ ಪುನೈಚಕ್ ಎಂಬಲ್ಲಿನ ನಿವಾಸಿ ರಾಕೇಶ್ ಕುಮಾರ್ ಅವರು ಆಕೆಗೆ ಉದ್ಯೋಗ ದೊರಕಿಸಿ ಕೊಡುವ ಭರವಸೆ ನೀಡಿ ಕರೆತಂದಿದ್ದ.
ಆಕೆಯನ್ನು ರಾಕೇಶ್ ತನ್ನ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದ. ಇದರಿಂದ ಕಂಗೆಟ್ಟ ಯುವತಿ ತಾನು ಕಳೆದ ಕೆಲವು ದಿನಗಳಿಂದ ತಂಗಿದ್ದ ಹೊಟೇಲಿನಿಂದ ತಪ್ಪಿಸಿಕೊಂಡು ಓಡಿದ್ದಳು. ಆದರೆ ರಾಕೇಶ್ ಮತ್ತು ಆತನ ಸ್ನೇಹಿತರು ಆಕೆಯನ್ನು ಪತ್ತೆ ಮಾಡಿ ಈ ದಾಳಿ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾನೆ ಎಂಬ ಆರೋಪ ಹೊತ್ತಿರುವ ರಾಕೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆ ಹುಡುಗಿಯ ಹೇಳಿಕೆಯನ್ವಯ ಪೊಲೀಸರು ರಾಕೇಶ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕುರಿತು ವರದಿ ಸಲ್ಲಿಸುವಂತೆ ಮಹಿಳಾ ಆಯೋಗವು ಪೊಲೀಸ್ ಅಧಿಕಾರಿಗೆ ತಿಳಿಸಿದ್ದಾರೆ. |