2002ರಲ್ಲಿ ನಡೆದ ಗೋಧ್ರಾ ನಂತರದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ವಿಶೇಷ ತನಿಖಾ ತಂಡ(ಸಿಟ್)ವು ತನಿಖೆಗೊಳಪಡಿಸುವುದರ ವಿರುದ್ಧ ತಡೆಯಾಜ್ಞೆ ನೀಡಬೇಕು ಎಂಬುದಾಗಿ ಸಲ್ಲಿಸಲಾಗಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ತಳ್ಳಿಹಾಕಿದೆ.
ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತಂಡವು ಜಕಿಯ ಜಾಫ್ರಿ ಸಲ್ಲಿಸಿರುವ ಮನವಿಯನ್ವಯ ಗುಜರಾತ್ ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಲು ಮುಕ್ತವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಜಕಿಯಾ ಜಾಫ್ರಿ ಅವರು ಮಾಜಿ ಸಂಸದ ಇಶಾನ್ ಜಾಫ್ರಿ ಅವರ ಪತ್ನಿ. ಇಶಾನ್ ಅವರು 2002ರಲ್ಲಿ ನಡೆಸಲಾದ ಗಲಭೆಯಲ್ಲಿ ಇತರ 39 ಮಂದಿಯೊಂದಿಗೆ ಸಾವನ್ನಪ್ಪಿದ್ದರು.
ನರೇಂದ್ರ ಮೋದಿ ಹಾಗೂ ಇತರ 62 ಮಂದಿಯನ್ನು ಸಿಟ್ ತನಿಖೆಗೊಳಪಡಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ಕುರಿತು ತೀರ್ಪನ್ನು ಗುಜರಾತ್ ಹೈಕೋರ್ಟ್ ಎಪ್ರಿಲ್ 21ರಂದು ಕಾಯ್ದಿರಿಸಿತ್ತು.
ಲುನಾವಾಡದ ಮಾಜಿ ಶಾಸಕ ಬಿಜೆಪಿಯ ಕಲುಬಾಯ್ ಮಲಿವಾಡ್ ಅವರು ತಡೆಯಾಜ್ಞೆ ಕೋರಿ ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿ ವಾಘೆಲ ಅವರು ಈ ಅರ್ಜಿಯ ವಿಚಾರಣೆ ನಡೆಸಿದ್ದರು. ಗೋಧ್ರಾ ಗಲಭೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ಸುಪ್ರೀಂ ಕೋರ್ಟ್ ನೇಮಿಸಿದೆ. |