ಇತ್ತೀಚೆಗೆ ದುರಂತಕ್ಕೀಡಾದ ದೆಹಲಿ ಮೆಟ್ರೋ ರೈಲು ಯೋಜನೆಯ ಗುತ್ತಿಗೆದಾರ ಸಂಸ್ಥೆಯಾಗಿರುವ ಗ್ಯಾಮನ್ ಇಂಡಿಯಾ ಕಂಪೆನಿಗೆ ಶುಕ್ರವಾರ ದೆಹಲಿ ಹೈ ಕೋರ್ಟ್ ನೋಟೀಸ್ ನೀಡಿದೆ. ಜುಲೈ 12ರಂದು ಸಂಭವಿಸಿದ ದುರಂತದ ಬಲಿಪಶುಗಳ ಕುಟುಂಬಿಕರು ಸಲ್ಲಿಸಿರುವ ಆರ್ಜಿಯ ಆಧಾರದಲ್ಲಿ ಈ ನೋಟೀಸು ನೀಡಲಾಗಿದೆ.
ನ್ಯಾಯಮೂರ್ತಿ ರೇವಾ ಖೇತ್ರಪಾಲ್ ಅವರು ನೋಟೀಸು ನೀಡಿದ್ದು, ಆಗಸ್ಟ್ 20ರೊಳಗಾಗಿ ಉತ್ತರಿಸಲು ಹೇಳಿದ್ದು, ಆ ದಿನದಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಮೇಲ್ಸೇತುವೆ ಕುಸಿದು ಅಸು ನೀಗಿದ ನಾಲ್ವರ ಕುಟುಂಬಿಕರು ಸಲ್ಲಿಸಿರುವ ಜಂಟಿ ಅರ್ಜಿಯಾಧಾರದಲ್ಲಿ ನ್ಯಾಯಾಲಯ ಈ ಆದೇಶ ಪಾಸು ಮಾಡಿದೆ.
ಓರ್ವ ಇಂಜಿನೀಯರ್ ಸೇರಿದಂತೆ ಆರುಮಂದಿ ಸಾವನ್ನಪ್ಪಿದ್ದು ಸುಮಾರು 20 ಮಂದಿ ಗಾಯಗೊಂಡಿದ್ದರು. ದುರಂತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ತಲಾ 50 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ. |