ಏಪ್ರಿಲ್ 21ರಂದು ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಅಪಮಾನಕಾರಿಯಾಗಿ ನಡೆಸಿಕೊಂಡಿದ್ದಕ್ಕೆ ಪ್ರತಿಯಾಗಿ ಸರಕಾರವು ಅಮೆರಿಕಾದ ಕಾಂಟಿನೆಂಟಲ್ ವಿಮಾನಯಾನ ಸಂಸ್ಥೆಯ ನಾಲ್ವರು ಉದ್ಯೋಗಿಗಳ ಮೇಲೆ ಎಫ್‌ಐಆರ್ ದಾಖಲಿಸಿದೆ.
ದೇಶೀಯ ನಿರ್ದೇಶಕ ಲಾರೆಂಟ್ ರೆಕೋರಾ, ಕಾಂಟಿನೆಂಟಲ್ ಏರ್‌ಲೈನ್ಸ್‌ನ ನಿಲ್ದಾಣ ವ್ಯವಸ್ಥಾಪಕ ಅಲೆನ್ ಫೀಲ್ಡ್, ಏರಿಯಾ ಸೆಕ್ಯುರಿಟಿ ಮ್ಯಾನೇಜರ್ ಸಿಂಥಿಯಾ ಕಾರ್ಲಿಯರ್ ಮತ್ತು ಭದ್ರತಾ ಉಸ್ತುವಾರಿ ಜಯದೀಪ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಅದೇ ಹೊತ್ತಿಗೆ ಪ್ರಕರಣದ ಬಗ್ಗೆ ಸಂಸತ್ತಿನಲ್ಲಿ ತೀವ್ರ ಟೀಕೆಗಳು ಕೇಳಿ ಬಂದಿವೆ. ಕಲಾಂರನ್ನು ತಪಾಸಣೆ ನಡೆಸಿರುವುದು ಅಮೆರಿಕಾದ ಸುರಕ್ಷತಾ ನಿಯಮಗಳ ಪಾಲನೆಯಷ್ಟೇ ಎಂದಿದ್ದ ಅಮೆರಿಕಾದ ವಿದೇಶಾಂಗ ಭದ್ರತಾ ಆಡಳಿತದ (ಟಿಎಸ್‌ಎ) ಹೇಳಿಕೆಗೆ ಸಂಸದರು ಒಕ್ಕೊರಲಿನಿಂದ ಖಂಡನೆ ವ್ಯಕ್ತಪಡಿಸಿದ್ದಾರೆ.
ಅಮೆರಿಕಾದ ನಿಯಮಗಳನ್ನು ಯುಪಿಎ ಸರಕಾರ ಮಂಡಿಯೂರಿ ಸ್ವೀಕರಿಸಿದ ಕಾರಣ ಕಲಾಂ ಅವಮಾನಕ್ಕೊಳಗಾಗಬೇಕಾಯಿತು ಎಂದು ಬಿಜೆಪಿ ಮುಖಂಡ ರಾಜೀವ್ ಪ್ರತಾಪ್ ರೂಡಿ ಟೀಕಿಸಿದ್ದಾರೆ.
ಶಿಷ್ಟಾಚಾರಗಳನ್ನು ಸರಕಾರ ಸಮರ್ಪಕವಾಗಿ ನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಈ ಸಂಬಂಧ ಸರಕಾರವು ಸಂಸತ್ತಿನಲ್ಲಿ ಅಧಿಕೃತ ಹೇಳಿಕೆ ನೀಡಬೇಕೆಂದು ಆಗ್ರಹಿಸಿದರು. ರೂಡಿ ಎನ್‌ಡಿಎ ಸರಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಈ ಪ್ರಕರಣಕ್ಕಾಗಿ ಈಗಾಗಲೇ ಏರ್‌ಲೈನ್ಸ್ ಕಲಾಂ ಅವರಿಂದ ಕ್ಷಮೆ ಯಾಚಿಸಿದೆ. ಆರಂಭದಲ್ಲಿ ತನ್ನದೇನೂ ತಪ್ಪಿಲ್ಲ ಎಂದು ಮೊಂಡು ವಾದ ಮಂಡಿಸಲು ಕಾಂಟಿನೆಂಟಲ್ ಯತ್ನಿಸಿತ್ತಾದರೂ, ಪ್ರಕರಣ ತೀವ್ರ ರೂಪ ಪಡೆಯುತ್ತಿರುವುದನ್ನು ಕಂಡು ವಿಷಾದ ವ್ಯಕ್ತಪಡಿಸಿತ್ತು.
|