ಪಾಕಿಸ್ತಾನ ಕುರಿತ ರಾಜತಾಂತ್ರಿಕ ಉಪಕ್ರಮವಾಗಿ ಈಜಿಪ್ಟಿನಲ್ಲಿ ಭಾರತ-ಪಾಕಿಸ್ತಾನ ಜಂಟಿ ಹೇಳಿಕೆಗೆ ಸಹಿ ಮಾಡಿ ವಿವಾದಕ್ಕೆ ಸಿಲುಕಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೃಢವಾಗಿ ಬೆಂಬಲಿಸಲು ಕಾಂಗ್ರೆಸ್‌ನ ಉನ್ನತ ಸ್ತರದ ನಾಯಕರು ಶುಕ್ರವಾರ ರಾತ್ರಿ ನಿರ್ಧರಿಸಿದ್ದಾರೆ.
ಈ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಸೋನಿಯಾ ಗಾಂಧಿ, ರಕ್ಷಣಾ ಸಚಿವ ಎ.ಕೆ. ಆಂಟನಿ, ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಗೃಹಸಚಿವ ಹಾಗೂ ಸೋನಿಯಾರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಹಾಗೂ ಇತರರು ಪಾಲ್ಗೊಂಡಿದ್ದರು.
ಜಂಟಿಹೇಳಿಕೆಯಿಂದಾಗಿ ಪಕ್ಷದಲ್ಲಿನ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಕಾಂಗ್ರೆಸ್ ಕೋರ್ ಸಮೂಹದ ಸಭೆ ನಡೆದಿದ್ದು, ಸಭೆಯ ವಿವರಗಳು ಲಭ್ಯವಾಗಿಲ್ಲ.
ಈ ನಿರ್ಣಾಯಕ ಸಭೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ನಾಯಕರೊಬ್ಬರು, ಈ ಸಭೆ ಮಾಮೂಲಿ ಸಭೆ ಎಂದಷ್ಟೆ ಹೇಳಿ, ಸಭೆಯ ವಿವರಗಳನ್ನು ನೀಡಲು ನಿರಾಕರಿಸಿದರು.
|