ಮುಂಬೈದಾಳಿಯ ಪ್ರತ್ಯಕ್ಷದರ್ಶಿ ಪೊಲೀಸ್ ಒಬ್ಬರು ವಿಶೇಷ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯಿಂದ ನರಹಂತಕ ಉಗ್ರ ಅಜ್ಮಲ್ ಅಮೀರ್ ಕಸಬ್ ಆಕ್ರೋಶಗೊಂಡ ಘಟನೆ ಶುಕ್ರವಾರ ಸಂಭವಿಸಿತು.
ದಾಳಿಯ ವೇಳೆ ಹತರಾದ ಧೀರಯೋಧರಾದ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ ಮತ್ತು ವಿಜಯ್ ಸಾಲಸ್ಕರ್ ಪ್ರಯಾಣಿಸುತ್ತಿದ್ದ ಕ್ವಾಲಿಸ್‌ನಲ್ಲಿ ಇದ್ದ ಅರುಣ್ ಜಾಧವ್ ಅವರು, ಕಸಬ್ ಕರ್ಕರೆ ಅವರ ಶವವನ್ನು ಕಾರಿನಿಂದ ಎಸೆಯುವಾಗ ಕೆಟ್ಟಶಬ್ದ ಬಳಸಿದ್ದನೆಂದು ಹೇಳಿರುವುದು ಕಸಬ್‌ನನ್ನು ವ್ಯಗ್ರಗೊಳಿಸುವಂತೆ ಮಾಡಿತು.
ಉಗ್ರರು ಪೊಲೀಸರಿಂದ ವಶಪಡಿಸಿಕೊಂಡ ಕಾರನ್ನು ಚಲಾಯಿಸಿದ ವೇಳೆ ಕಾರಿನಲ್ಲಿದ್ದ ಜಾಧವ್ ಅವರು ಹಿಂದಿನ ಸೀಟಿನಲ್ಲಿ ಸತ್ತಂತೆ ನಟಿಸಿದ್ದರು. ಇವರು ಶುಕ್ರವಾರ ನ್ಯಾಯಾಲಯದಲ್ಲಿ ಮುಂಬೈ ದಾಳಿಗೆ ಸಂಬಂಧಿಸಿದಂತೆ ಸಾಕ್ಷ್ಯ ನುಡಿದಿದ್ದರು. ಕರ್ಕರೆ ಅವರ ದೇಹವನ್ನು ಎಳೆದಾಗ ಕಸಬ್ "++++++ ಬುಲೆಟ್‌ಪ್ರೂಫ್ ಜಾಕೆಟ್ ಧರಿಸಿದ್ದಾನೆ ಎಂದು ಹೇಳಿದ" ಎಂಬುದಾಗಿ ಡಿಫೆನ್ಸ್ ವಕೀಲ ಅಬ್ಬಾಸ್ ಖಾಜ್ಮಿ ನಡೆಸಿದ ಪಾಟೀಸವಾಲಿನ ವೇಳೆ ನುಡಿದರು.
ಸಾಮಾನ್ಯವಾಗಿ ಆತ್ಮವಿಶ್ವಾಸದಿಂದ ಶಾಂತಿಯಿಂದಲೇ ಇರುವ ಕಸಬ್ ಇದನ್ನು ಕೇಳಿದ ತಕ್ಷಣ ತನ್ನ ಸೀಟಿನಿಂದ ಎದ್ದು ನಿಂತ. ವಿಶೇಷ ನ್ಯಾಯಾಧೀಶರು ತಕ್ಷಣ ಆತನಿಗೆ ಕುಳಿತುಕೊಳ್ಳುವಂತೆ ಹೇಳಿದರು. ಬಳಿಕ ಆತ ಇತರ ಇಬ್ಬರು ಆರೋಪಿಗಳಾದ ಫಾಹೀಮ್ ಅನ್ಸಾರಿ ಮತ್ತು ಸಬಾವುದ್ದೀನ್ ಶೇಕ್‌ರೊಂದಿಗೆ ಸಿಟ್ಟಿನಿಂದ ಮಾತನಾಡುತ್ತಿರುವುದು ಕೇಳಿ ಬಂತು.
ಅಜ್ಮಲ್ ಕೆಲವು ದಿನಗಳ ಹಿಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಗ, ಪೊಲೀಸ್ ಅಧಿಕಾರಿಗಳನ್ನು ತಾನು ಕೊಂದಿಲ್ಲ, ತನ್ನ ಸಹಚರ ಕೊಂದಿರುವುದು ಎಂದಿದ್ದ. ಆದರೆ ಜಾಧವ್ ಅವರು ಕಸಬ್ ಪೊಲೀಸ್ ಅಧಿಕಾರಿಗಳತ್ತ ಗುಂಡು ಹಾರಿಸಿದ್ದ. ಇದರಿಂದಾಗಿ ತನ್ನ ಕೈಗೆ ಗಾಯವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಬಳಿಕ ಕಸಬ್ ತನ್ನ ವಕೀಲ ಖಾಜ್ಮಿ ಅವರ ಕಿವಿಯಲ್ಲಿ ಸಿಟ್ಟಿನಿಂದ ಏನೋ ಉಸುರುತ್ತಿದ್ದುದು ಕಂಡು ಬಂತು. ಇದಾದ ನಂತರ ಭೋಜನ ವಿರಾಮಕ್ಕೆ ಮುಂಚಿತವಾಗಿ "ಜಾಧವ್ ಅವರು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಕಾರಿನಲ್ಲಿ ಗುಂಡು ಹಾರಿಸಿರುವ ಪ್ರಸ್ತಾಪವಿಲ್ಲ" ಎಂದು ನ್ಯಾಯಲಯಕ್ಕೆ ನುಡಿದ.
ಜಾಧವ್ ಪ್ರಸ್ತಾಪಿಸಿರುವಂತಹ ಕೆಟ್ಟಶಬ್ದವನ್ನು ಪಾಕಿಸ್ತಾನದಲ್ಲಿ ಬಳಸುವುದಿಲ್ಲ. ಹಾಗಾಗಿ ಕಸಬ್ ಕೋಪಗೊಂಡಿದ್ದ ಎಂದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಾಜ್ಮಿ ಹೇಳಿದ್ದಾರೆ.
ಭೋಜನದ ಬಳಿಕ ಜಾಧವ್ ಹೇಳಿಕೆಯನ್ನು ಪರೀಕ್ಷಿಸುವಂತೆ ಕಸಬ್ ನ್ಯಾಯಾಲಯವನ್ನು ವಿನಂತಿಸಿದ. "ನಿನ್ನ ಹೇಳಿಕೆಗೆ ಜಾಧವ್ ಹೇಳಿಕೆ ವಿರುದ್ಧವಾಗಿದೆ ಎಂದು ಭಾವಿಸಿದೆಯಾ" ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ, ಉತ್ತರಿಸಿದ ಕಸಬ್ "ನಾನು ಹಾಗೆ ತಿಳಿದಿಲ್ಲ. ನಂಗೊತ್ತು, ಸುಳ್ಳು ಯಾವಾಗಲು ಸುಳ್ಳು" ಎಂದು ನುಡಿದ.
|