ಈಜಿಪ್ಟಿನಲ್ಲಿ ಸಹಿಮಾಡಲಾಗಿರುವ ಭಾರತ-ಪಾಕಿಸ್ತಾನದ ಜಂಟಿ ಹೇಳಿಕೆಯ ಕುರಿತಂತೆ ಕಾಂಗ್ರೆಸ್ ಹಾಗೂ ಸರ್ಕಾರದ ನಡುವೆ ಬಿಕ್ಕಟ್ಟುಂಟಾಗಿದೆ ಎಂಬ ವರದಿಗಳನ್ನು ಶನಿವಾರ ಅಲ್ಲಗಳೆದಿರುವ ಪ್ರಧಾನಿ ಮನಮೋಹನ್ ಸಿಂಗ್, ಹೇಳಿಕೆಗೆ ಕುರಿತಂತೆ ಸರ್ಕಾರವು ಎಲ್ಲಾ ಅಗತ್ಯ ಮಾಹಿತಿಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.
"ಈ ಕುರಿತು ಸಂಸತ್ತಿನಲ್ಲಿ ನಾನು ಈಗಾಗಲೇ ಹೇಳಿಕೆ ನೀಡಿದ್ದೇನೆ ಮತ್ತು ಮತ್ತೊಮ್ಮೆ ಈ ಕುರಿತು ಚರ್ಚಿಸಲಾಗುವುದು. ನಾನು ಈ ಕುರಿತು ಸ್ಪಷ್ಟನೆ ನೀಡುತ್ತೇನೆ" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಹೆಚ್ಚು ಮಾತನಾಡಲು ಇಚ್ಛಿಸದ ಪ್ರಧಾನಿ ಸಿಂಗ್, "ಈ ವಿಚಾರವು ಸದನದಲ್ಲಿ ಚರ್ಚೆಗೆ ಬಾಕಿ ಇರುವಾಗ ಯಾವುದೇ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸುವುದು ಸೂಕ್ತವಲ್ಲ" ಎಂದು ನುಡಿದರು.
ಜುಲೈ 29ರಂದು ಪ್ರಧಾನಿ ಅವರು ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳಿಗೆ ಮಾಧ್ಯಮಗಳು ಜವಾಬ್ದಾರ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.
ಪ್ರಧಾನಿಯವರ ರಾಜತಾಂತ್ರಿಕ ಉಪಕ್ರಮಕ್ಕೆ ದೃಢವಾದ ಬೆಂಬಲ ನೀಡಲು ಕಾಂಗ್ರೆಸ್ ಶುಕ್ರವಾರ ನಿರ್ಧರಿಸಿದ ಬಳಿಕ ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದಿದೆ. |