ಬಲೂಚಿಸ್ಥಾನ ಅಶಾಂತಿಯಲ್ಲಿ ಭಾರತದ ಹಸ್ತಕ್ಷೇಪ ಇದೆ ಎಂಬ ಕುರಿತು ಪಾಕಿಸ್ತಾನ ಯಾವುದೇ ಪುರಾವೆ ನೀಡಿಲ್ಲ ಎಂದು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಇಂತಹ ಆರೋಪಗಳನ್ನು ಮಾಡುವ ಮುಂಚಿತವಾಗಿ ಪಾಕಿಸ್ತಾನವು ಸೂಕ್ತ ಪುರಾವೆಗಳನ್ನು ಒದಗಿಸಬೇಕು ಎಂದು ಅವರು ನುಡಿದರು.
"ಬಲೂಚಿಸ್ಥಾನ ವಿಚಾರದಲ್ಲಿ ನಮ್ಮ ಹಸ್ತಕ್ಷೇಪವಿಲ್ಲ. ಬಲೂಚಿಸ್ಥಾನದಲ್ಲಿ ಪಾಕಿಸ್ತಾನದ ಆಂತರಿಕ ವಿಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಭಾರತದ ಬೆಂಬಲವಿಲ್ಲ ಎಂದು ಬಲೂಚಿಸ್ಥಾನದ ನಾಯಕನೇ ಹೇಳಿದ್ದಾನೆ. ಪಾಕಿಸ್ತಾನದೊಂದಿಗಿನ ನಮ್ಮ ಪಶ್ಚಿಮ ಗಡಿಗಳಲ್ಲಿ ಅವರು ನಮಗೇ ಸಾಕಷ್ಟು ಸಮಸ್ಯೆಗಳನ್ನು ನೀಡುತ್ತಿರುವಾಗ ನಾವು ಈ ವಿಚಾರದಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಏನಿದೆ" ಎಂಬುದಾಗಿ ಚಿದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನವು ಭಾರತದ ಮೇಲೆ ಹೊರಿಸಿರುವ ಹೊಸ ಆರೋಪಗಳಿಗೆ ಚಿದಂಬರಂ ಉತ್ತರಿಸುತ್ತಿದ್ದರು.
ಭಾರತವು ಬಲೂಚಿಸ್ಥಾನ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಆಫ್ಘಾನಿಸ್ತಾನದಲ್ಲಿ ಬಾರತವು ಉಗ್ರವಾದಿ ಶಿಬಿರಗಳನ್ನು ನಡೆಸುತ್ತಿದ್ದು ಅಲ್ಲಿ ಬಲೂಚಿಸ್ಥಾನದ ಯುವಕರಿಗೆ ತರಬೇತಿ ನೀಡುತ್ತಿದೆ ಎಂಬುದಾಗಿ ಶುಕ್ರವಾರ ಪಾಕಿಸ್ತಾನದ ಆಂತರಿಕ ಸಚಿವ ರೆಹ್ಮಾನ್ ಮಲಿಕ್ ಹೇಳಿಕೆ ನೀಡಿದ್ದರು. ಅವರು ಪಾಕಿಸ್ತಾನ ಸಂಸತ್ತಿನ ಮೇಲ್ಮನೆ ಸೆನೆಟ್‌ನಲ್ಲಿ ಮಾತನಾಡುತ್ತಿದ್ದರು. |