ಭಾರತ ಮತ್ತು ಪಾಕಿಸ್ತಾನವು ಈಜಿಪ್ಟಿನಲ್ಲಿ ನೀಡಿರುವ ಜಂಟಿ ಹೇಳಿಕೆಯಲ್ಲಿ 'ಬಲೂಚಿಸ್ಥಾನವನ್ನು' ಪ್ರಸ್ತಾಪಿಸಲು ಒಪ್ಪಿರುವುದು ಯುಪಿಎ ಸರ್ಕಾರದ ಅತಿದೊಡ್ಡ ರಾಜತಾಂತ್ರಿಕ ಪ್ರಮಾದ ಎಂದು ಬಿಜೆಪಿ ಶನಿವಾರ ಹೇಳಿದೆ.
"ಜಂಟಿ ಹೇಳಿಕೆಯು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಹುದೊಡ್ಡ ರಾಜತಾಂತ್ರಿಕ ವೈಫಲ್ಯ" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರಕಾಶ್ ಜಾವಡೆಕಾರ್ ಹೇಳಿದ್ದಾರೆ.
ಪಾಕಿಸ್ತಾನವು ಆಪಾದಿಸುತ್ತಿರುವಂತೆ ಭಾರತವು ಬಲೂಚಿಸ್ಥಾನದಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ ಎಂದು ವಿಶ್ವದ ಯಾವುದೇ ರಾಷ್ಟ್ರವು ಹೇಳಿಲ್ಲ, ಆದರೆ ಜಂಟಿ ಹೇಳಿಕೆಯಲ್ಲಿ ಇದರ ಪ್ರಸ್ತಾಪವು ಯುಪಿಎ ಸರ್ಕಾರದ ಒಟ್ಟಾರೆ ಅವಿವೇಕತನ ಮತ್ತು ದೌರ್ಬಲ್ಯವಾಗಿದೆ ಎಂದು ಜಾವಡೆಕರ್ ಹೇಳಿದ್ದಾರೆ.
ಮುಂಬೈದಾಳಿ ಬಳಿಕ ಪಾಕಿಸ್ತಾನಕ್ಕೆ ಸಲ್ಲಿಸಲಾಗಿರುವ ಪಟ್ಟಿಯ ಪ್ರಕಾರ ಉಗ್ರರನ್ನು ಒಪ್ಪಿಸುವ ತನಕ ಪಾಕಿಸ್ತಾನದೊಂದಿಗೆ ಭಾರತ ಸರ್ಕಾರ ಮೂತುಕತೆ ನಡೆಸಬಾರದು ಎಂಬುದಾಗಿ ಬಿಜೆಪಿ ಒತ್ತಾಯಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಬೃಹತ್ ಹೈದರಾಬಾದ್ ಮುನಿಸಿಪಲ್ ಚುನಾವಣೆಗಳು ಮುಂದಿನ ತಿಂಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯತಂತ್ರವನ್ನು ರಾಜ್ಯದ ನಾಯಕರೊಂದಿಗೆ ಚರ್ಚಿಸಲು ಇಲ್ಲಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. |