ಇಡೀ ದೇಶವೇ ಕಾರ್ಗಿಲ್ ವಿಜಯೋತ್ಸವದ 10ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನಪ್ಪಿದ ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರಿಗೆ ನಾನು ಇಡೀ ದೇಶದೊಂದಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಭಾರತದ ಏಕತೆ ಮತ್ತು ಪ್ರಾಮಾಣಿಕತೆಯನ್ನು ರಕ್ಷಿಸಲು ಅವರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ ಎಂದು ಅಮರ್ ಜವಾನ್ ಜ್ಯೋತಿಯಲ್ಲಿನ ಸ್ಮರಣೆ ಪುಸ್ತಕದಲ್ಲಿ ಪ್ರಧಾನಿಯವರು ತನ್ನ ಸಾಲುಗಳನ್ನು ನಮೂದಿಸಿದ್ದಾರೆ.
ದೇಶವನ್ನು ಬೃಹದಾಕಾರಕ್ಕೆ ಬೆಳೆಸಲು ಹಾಗೂ ನಮ್ಮ ದೇಶದ ಏಕತೆ ಮತ್ತು ಪ್ರಾಮಾಣಿಕತೆಯನ್ನು ರಕ್ಷಿಸಲು ದೃಢನಿಷ್ಠೆಯಿಂದ ನಮ್ಮನ್ನು ನಾವು ಅರ್ಪಿಸಿಕೊಳ್ಳುವುದೇ ವೀರ ಅಧಿಕಾರಿಗಳು ಮತ್ತು ಯೋಧರಿಗೆ ನಾವು ಸಲ್ಲಿಸಬಹುದಾದ ಅತ್ಯುತ್ತಮ ಕಾಣಿಕೆ ಎಂದೂ ಅವರು ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿರುವ ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ಇದೇ ಮೊದಲ ಬಾರಿಗೆ ಕಾರ್ಗಿಲ್ ವಿಜಯೋತ್ಸವ ದಿನದಲ್ಲಿ ಆಡಳಿತ ಪಕ್ಷ ಪಾಲ್ಗೊಂಡಿದೆ.
ಪ್ರಧಾನಿಯವರ ಜತೆ ರಕ್ಷಣಾ ಸಚಿವ ಎ.ಕೆ. ಆಂಟನಿ, ನೌಕಾ ಪಡೆಯ ಮುಖ್ಯಸ್ಥ ಸುರೇಶ್ ಮೆಹ್ತಾ, ಭೂಸೇನೆಯ ನೋಬಲ್ ತಾಂಬುರಾಜ್ ಹಾಗೂ ವಾಯು ಸೇನೆಯ ಪಿ.ಕೆ. ಬಾರ್ಬೊರಾ ಕೂಡ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
1999ರ ಕಾರ್ಗಿಲ್ ಯುದ್ಧದಲ್ಲಿ 533 ಯೋಧರು ಹಾಗೂ ಸೇನಾ ಅಧಿಕಾರಿಗಳು 13 ಪ್ರಮುಖ ಪ್ರದೇಶಗಳನ್ನು ಪಾಕಿಸ್ತಾನಿ ಪಡೆಗಳಿಂದ ವಾಪಸು ಪಡೆದುಕೊಳ್ಳುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ್ದರು.
ಇಲ್ಲಿನ ಕಾರ್ಯಕ್ರಮದ ನಂತರ ಪ್ರಧಾನಿಯವರು ವಿಶಾಖಪಟ್ಟಣಕ್ಕೆ ತೆರಳಿದ್ದಾರೆ. ಅವರು ದೇಶದ ಪ್ರಪ್ರಥಮ ಅಣುಶಕ್ತಿ ಚಾಲಿತ ಜಲಾಂತರ್ಗಾಮಿಯನ್ನು ರಾಷ್ಟ್ರಕ್ಕೆ ಇಂದು ಸಮರ್ಪಿಸಲಿದ್ದಾರೆ. ಭಾರತವು ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ಹೊಂದುವ ಮೂಲಕ ಕೂಡ ಅಮೆರಿಕಾ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ಸಾಲಿಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದೆ.
|