ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತಮ್ಮ ಪತ್ನಿಯ ಗುರುಶರಣ್ ಕೌರ್ ಜತೆ ಐಎನ್‌ಎಸ್ ಅರಿಹಂತ್ ಜಲಾಂತರ್ಗಾಮಿಯನ್ನು ಲೋಕಾರ್ಪಣೆ ಮಾಡುವ ಮೂಲಕ ಭಾರತವು ಅಣ್ವಸ್ತ್ರ ಚಾಲಿತ ಜಲಾಂತರ್ಗಾಮಿ ಹೊಂದಿರುವ 6 ರಾಷ್ಟ್ರಗಳ ಸಾಲಿನಲ್ಲಿ ಭಾನುವಾರ ಸೇರಿದೆ. ಭಾರತದ ನೌಕಾನಿರ್ಮಾಣ ಸಾಮರ್ಥ್ಯದಲ್ಲಿ ದೊಡ್ಡ ದಾಪುಗಾಲಿನ ಸಂಕೇತವಾಗಿರುವ ಐಎನ್‌ಎಸ್ ರಾಷ್ಟ್ರದಲ್ಲಿ ನಿರ್ಮಾಣವಾಗುವ ಇಂತಹ ಮೂರು ಯುದ್ಧನೌಕೆಗಳಲ್ಲಿ ಒಂದಾಗಿದೆ.
ವ್ಯಾಪಕ ಸಿದ್ಧತೆ ಮತ್ತು ಸಮುದ್ರ ಅಭ್ಯಾಸಗಳ ಬಳಿಕ ಭಾರತದ ನೌಕಾಪಡೆಗೆ ದೇಶೀಯವಾಗಿ ನಿರ್ಮಿತವಾದ ಅಣ್ವಸ್ತ್ರ ಚಾಲಿತ ಸಬ್‌ಮೆರೀನ್ ಸೇರ್ಪಡೆಯಾಗಿದೆ. ರಕ್ಷಣಾ ಸಚಿವ ಎ.ಕೆ. ಆಂಟನಿ ಕೂಡ ಉದ್ಘಾಟನೆ ಸಮಾರಂಭದಲ್ಲಿ ಹಾಜರಿದ್ದರು. ಐಎನ್‌ಎಸ್ ಅರಿಹಂತ್ ಜಲಾಂತರ್ಗಾಮಿಯು ಅಣು ಚಾಲಿತವಾಗಿದ್ದು, ಇದು ಸುದೀರ್ಘಾವಧಿಯವರೆಗೆ ಜಲಗರ್ಭದಲ್ಲಿ ಇರಬಲ್ಲದು ಮತ್ತು ಅಕ್ಷರಶಃ ಜಲಗರ್ಭದಲ್ಲಿ ಅದರ ಚಲನವಲನ ಗುರುತಿಸುವುದು ಕಷ್ಟ. ಇದು ಜಲಾಂತರ್ಗಾಮಿಯ ಎಲ್ಲ ಮಾನದಂಡಗಳನ್ನು ಪೂರೈಸಿದ್ದು, ಪರಮಾಣು ಶಸ್ತ್ರಗಳ ಉಡಾವಣೆಗೆ ಒಂದು ವೇದಿಕೆಯಾಗಿದೆ.
ಡಿಆರ್‌ಡಿಒ ಮತ್ತು ನೌಕಾಪಡೆ ಸೇರಿ ನಿರ್ಮಿಸಿರುವ ಈ ಸಬ್‌ಮೆರೀನ್ ಅತ್ಯಂತ ಮುಂದುವರಿದ ತಂತ್ರಜ್ಞಾನದಿಂದ ಕೂಡಿದ್ದು, ವೈರಿಪಡೆಗೆ ಅತೀ ಸಮೀಪಕ್ಕೆ ತೆರಳಿ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಸುಮಾರು 750 ಕಿಮೀ ವ್ಯಾಪ್ತಿವರೆಗೆ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವನ್ನು ಐಎನ್‌ಎಸ್ ಅರಿಹಂತ್ ಹೊಂದಿದ್ದು, 5 ಸಾವಿರ ಟನ್ ತೂಕವನ್ನು ಹೊಂದಿದೆ. 12 ಅಣ್ವಸ್ತ್ರ ಕ್ಷಿಪಣಿಗಳನ್ನು ಅರಿಹಂತ್ ಉಡಾಯಿಸಬಲ್ಲುದೆಂದು ಹೇಳಲಾಗಿದೆ. 2011ರಿಂದ ಕಾರ್ಯಾರಂಭವಾಗಲಿದ್ದು, ಭಾರತದ ನೌಕಾಪಡೆಗೆ ಪರಾವಲಂಬನೆಗೆ ತೆರೆಬಿದ್ದಿದೆಯೆಂದು ಹೇಳಲಾಗಿದೆ. |