ಕಾನೂನು ಸಚಿವ ವೀರಪ್ಪ ಮೊಯ್ಲಿಯವರು ಸರ್ವೋಚ್ಚ ನ್ಯಾಯಾಲಯದ ಶಾಖಾ ಪೀಠವನ್ನು ಬೆಂಗಳೂರಿಗೆ ತರುವ ಬಗ್ಗೆ ಆಗಾಗ ಮಾತನಾಡುತ್ತಿದ್ದಂತೆ, ಅತ್ತ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರು ಚೆನ್ನೈಯಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ ಜನರಿಗೆ ಸಹಾಯವಾಗುವಂತೆ ಸುಪ್ರೀಂ ಕೋರ್ಟ್‌ನ ಪೀಠವೊಂದನ್ನು ಚೆನ್ನೈಯಲ್ಲಿ ಸ್ಥಾಪಿಸಬೇಕು ಮತ್ತು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ತಮಿಳನ್ನು ಅಧಿಕೃತ ಭಾಷೆಯಾಗಿ ಬಳಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದಕ್ಷಿಣ ಭಾರತದ ಪ್ರಭಾವೀ ರಾಜ್ಯ ತಮಿಳುನಾಡಿನಿಂದ ಸುಪ್ರೀಂ ಕೋರ್ಟ್ ಪೀಠದ ಬೇಡಿಕೆ ಬಂದಿರುವುದರಿಂದ ಕರ್ನಾಟಕಕ್ಕೆ ಪೀಠ ದೊರೆಯುವ ಬಗ್ಗೆ ಸಂಶಯಗಳು ತಲೆದೋರಿವೆ. ಆದರೂ ಕರ್ನಾಟಕದವರೇ ಆಗಿರುವ ಮೊಯ್ಲಿ ಕೇಂದ್ರ ಕಾನೂನು ಸಚಿವರಾಗಿರುವುದರಿಂದ ಪೀಠ ಬೆಂಗಳೂರಿನಲ್ಲಿ ಸ್ಥಾಪನೆಯಾಗುವುದೆಂಬ ಭರವಸೆ ರಾಜ್ಯದ ಜನತೆಯಲ್ಲಿದೆ.
ನ್ಯಾಯಮೂರ್ತಿಗಳ ಅತಿಥಿ ಗೃಹ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರುಣಾನಿಧಿ ಮಾತನಾಡುತ್ತಾ, ಸಾಮಾನ್ಯ ಜನರಿಗೂ ಸುಪ್ರೀಂ ಕೋರ್ಟ್ ಕೈಗೆಟುಕಬೇಕಾದ ಹಿನ್ನಲೆಯಲ್ಲಿ ಚೆನ್ನೈಯಲ್ಲಿ ಸರ್ವೋಚ್ಚ ನ್ಯಾಯಾಲಯದ ಪೀಠವೊಂದನ್ನು ಸ್ಥಾಪಿಸಬೇಕೆಂದು ಒತ್ತಿ ಹೇಳಿದರು.
ಮದ್ರಾಸ್ ಹೈಕೋರ್ಟ್‌ನಲ್ಲಿ ತಮಿಳನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ರಾಜ್ಯ ವಿಧಾನಸಭೆಯು ನಿರ್ಣಯ ಕೈಗೊಂಡಿದ್ದು, ಇದರ ಸದುಪಯೋಗವಾಗುವಂತೆ ಸಹಕಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇತರ ನ್ಯಾಯಮೂರ್ತಿಗಳಲ್ಲಿ ಕರುಣಾನಿಧಿ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅತಿಥಿ ಗೃಹವನ್ನು ಉದ್ಘಾಟಿಸಿದ ಬಾಲಕೃಷ್ಣನ್, ಸಾಕಷ್ಟು ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿರುವ ಕಾರಣದಿಂದ ವಕೀಲರು ತಮ್ಮ ಕಾನೂನು ವೃತ್ತಿಗೆ ಭಂಗವಾಗುವಂತಹ ಸಂದರ್ಭಗಳಲ್ಲಿ ಮಾತ್ರ ಮುಷ್ಕರ ನಡೆಸುವಂತೆ ಸಲಹೆ ನೀಡಿದರು.
ದೇಶದಾದ್ಯಂತ ಸುಮಾರು 200 ಕೌಟುಂಬಿಕ ನ್ಯಾಯಾಲಯಗಳನ್ನು ಶೀಘ್ರದಲ್ಲೇ ತೆರೆಯಲಾಗುತ್ತದೆ ಎಂದೂ ನ್ಯಾಯಮೂರ್ತಿಗಳು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
|