ಚೇಷ್ಟೆಯನ್ನೂ ಮೀರಿ ಗಂಭೀರ ರೀತಿಯಲ್ಲಿ ತೊಂದರೆ ಕೊಡುವ ಮಂಗಗಳಿಗಿನ್ನು ಕಾಲವಲ್ಲ; ಆ ರೀತಿಯ ವರ್ತನೆ ತೋರಿಸುವ ಕೋತಿಗಳಿಗೆ ತಕ್ಕ 'ಪಾಠ' ಕಲಿಸಲು ಪಂಜಾಬ್ ಸರಕಾರ ಮುಂದಾಗಿರುವುದೇ ಅದಕ್ಕೆ ಸಾಕ್ಷಿ.ಅಪರಾಧಿ ಪ್ರವೃತ್ತಿಯನ್ನು ಹೊಂದಿರುವ ಕ್ರೂರ ಕಪಿಗಳ ವರ್ತನೆಯಲ್ಲಿ ಬದಲಾವಣೆ ತರುವುದೇ ಸರಕಾರದ ಉದ್ದೇಶ. ಅದಕ್ಕಾಗಿ ಒಂದು ಕೋಟಿ ರೂಪಾಯಿಯನ್ನೂ ಸರಕಾರ ಮುಂಜೂರು ಮಾಡಿದೆ. ಸುಮಾರು 65,000 ಮಂಗಗಳನ್ನು ಹೊಂದಿರುವ ಪಂಜಾಬ್ ಅವುಗಳಿಂದ ಭಾರೀ ತೊಂದರೆಗಳನ್ನೆದುರಿಸುತ್ತಿದೆ. ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿ ಮಾನವನಿಗೆ ಗಂಭೀರ ಬೆದರಿಕೆಗಳನ್ನು ಒಡ್ಡುತ್ತಿರುವ ಕಾರಣ ಶಾಲೆ ತೆರೆಯುವ ನಿರ್ಧಾರಕ್ಕೆ ಸರಕಾರ ಬಂದಿದೆ.ಇದಕ್ಕಾಗಿ ಪಾಟಿಯಾಲದಲ್ಲಿ ಮಿನಿ ಪ್ರಾಣಿ ಸಂಗ್ರಹಾಲಯವನ್ನೇ ನಿರ್ಮಿಸುವ ಯೋಚನೆ ಸರಕಾರದ್ದು. ಇದಕ್ಕಿರುವ ಮತ್ತೊಂದು ಕಾರಣವೆಂದರೆ ಪಾಟಿಯಾಲ ಪ್ರದೇಶದಲ್ಲೇ ಸುಮಾರು 10 ಸಾವಿರ ಕೋತಿಗಳಿರುವುದು. ಅತೀ ಹೆಚ್ಚು ತೊಂದರೆಗೊಳಗಾಗಿರುವುದು ಕೂಡ ಪಾಟಿಯಾಲ ಪ್ರದೇಶದಲ್ಲೇ.ಮಕ್ಕಳನ್ನು ಬೆದರಿಸಿಸುವುದು, ಕಚ್ಚುವುದು, ಗಂಭೀರ ಹಲ್ಲೆ ಮಾಡುವುದು, ವಯಸ್ಕರಿಂದ ಆಹಾರ ವಸ್ತುಗಳನ್ನು ಕಿತ್ತುಕೊಳ್ಳುವುದು ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವುದು ಮುಂತಾದ ಗಂಭೀರ 'ಕೀಟಲೆ'ಗಳಿಂದ ಅಲ್ಲಿನ ಜನತೆ ರೋಸಿ ಹೋಗಿದ್ದಾರಂತೆ.ಈ ಕೋತಿಗಳು ಮಾಡುವ ಉಪದ್ರಗಳು ಇಷ್ಟಕ್ಕೇ ಸೀಮಿತವಲ್ಲ. ಟೀವಿ ಆಂಟೆನಾಗಳನ್ನು ಮುರಿದು ಹಾಕುವುದು, ಒಣಗಲು ಹಾಕಿದ ಬಟ್ಟೆಗಳನ್ನು ಹರಿಯುವುದು, ಪಾರ್ಕಿಂಗ್ ಮಾಡಿದ ಸ್ಕೂಟರ್, ಬೈಕುಗಳ ಸೀಟು ಹರಿಯುವುದು - ಬಿಡಿ ಭಾಗಗಳನ್ನು ಕಿತ್ತು ಬಿಸಾಕುವುದು, ಆಸ್ಪತ್ರೆಗಳಿಗೆ ದಾಳಿ ಮಾಡುವುದು, ಹೊಟೇಲುಗಳಿಗೆ 'ಭೇಟಿ' ನೀಡಿ ತಮ್ಮ ಪ್ರತಾಪ ಮೆರೆಯುವುದು... ಹೀಗೆ ಪಟ್ಟಿ ತುಂಬಾ ಉದ್ದಕ್ಕೆ ಬೆಳೆಯುತ್ತಾ ಹೋಗುತ್ತದೆ.ಇವೆಲ್ಲದರಿಂದ ಮುಕ್ತಿ ಪಡೆಯಲು ಸಂಯಮದ ದಾರಿ ಕಂಡುಕೊಂಡಿರುವ ಸರಕಾರವು ಉಗ್ರ ಕೋತಿಗಳಿಗೆ ಶಾಲೆಯನ್ನು ತೆರೆಯಲು ನಿರ್ಧರಿಸಿದೆ. ಈ ಶಾಲೆ 100 ಕೋತಿಗಳಿಗೆ ತಾತ್ಕಾಲಿಕ ಮನೆಯಾಗಲಿದ್ದು, ಅವುಗಳ ಕೀಟಲೆ ಬುದ್ಧಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾಣಿ ತಜ್ಞರು ತರಬೇತಿ ನೀಡಲಿದ್ದಾರೆ. ಎಲ್ಲವನ್ನೂ ವೈಜ್ಞಾನಿಕ ರೀತಿಯಲ್ಲೇ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಾಡುಗಳು ನಾಶವಾದ ಕಾರಣ ಹಳ್ಳಿ ಹಾಗೂ ನಗರಗಳತ್ತ ಮಂಗಗಳು ದಾಂಗುಡಿಯಿಡುತ್ತಿವೆ ಎಂಬುದು ಪ್ರಾಣಿ ತಜ್ಞರ ಅಭಿಪ್ರಾಯ. ಸರಕಾರವು ಮಂಗಗಳ ಪುನಶ್ಚೇತನ ಕೇಂದ್ರವನ್ನು ತೆರೆಯಲು ನಿರ್ಧರಿಸಿದೆಯಾದರೂ ಕೇಂದ್ರ ಪ್ರಾಣಿಸಂಗ್ರಹಾಲಯ ಪ್ರಾಧಿಕಾರದಿಂದ ಇನ್ನಷ್ಟೇ ಹಸಿರು ನಿಶಾನೆ ಬರಬೇಕಿದೆ. ಆದರೆ ಎಲ್ಲವೂ ಸರಿ ಹೋಗುವ ನಿರೀಕ್ಷೆ ಪಂಜಾಬ್ ಸರಕಾರದ್ದು. |