2002ರ ಗೋಧ್ರಾ ನಂತರದ ಹಿಂಸಾಕಾಂಡಕ್ಕೆ ಸಂಬಂಧಪಟ್ಟಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಮಂಪರು ಪರೀಕ್ಷೆ ನಡೆಸಬೇಕು ಎಂದು ಮಾಜಿ ಕೇಂದ್ರ ಜವಳಿ ಖಾತೆ ಸಚಿವ ಶಂಕರಸಿಂಗ್ ವಘೇಲಾ ಭಾನುವಾರ ಒತ್ತಾಯಿಸಿದ್ದಾರೆ. ವಿಶೇಷ ತನಿಖಾ ದಳಕ್ಕೆ ಮತ್ತು ಗೋಧ್ರಾ ನಂತರದ ಗಲಭೆ ತನಿಖೆ ನಡೆಸುತ್ತಿರುವ ನಾನಾವತಿ ಆಯೋಗಕ್ಕೆ ಎರಡು ಬಗೆಯಲ್ಲಿ ಹೇಳಿಕೆ ನೀಡುವ ಮೂಲಕ ದ್ವಂದ್ವ ನೀತಿಯನ್ನು ರಾಜ್ಯದ ಬಿಜೆಪಿ ಸರ್ಕಾರ ಅನುಸರಿಸುತ್ತಿದೆಯೆಂದು ವಘೇಲಾ ಸುದ್ದಿಗಾರರಿಗೆ ತಿಳಿಸಿದರು.
2002ರ ಗಲಭೆ ನಿಯಂತ್ರಣಕ್ಕೆ ವಿಫಲರಾದ ಸರ್ಕಾರಿ ಅಧಿಕಾರಿಗಳು, ಮತ್ತಿತರ ಸಚಿವರು ಹಾಗೂ ನರೇಂದ್ರ ಮೋದಿ ಅವರನ್ನು ಮಂಪರು ಪರೀಕ್ಷೆಗೆ ಗುರಿಪಡಿಸಿ ಸತ್ಯಾಂಶವನ್ನು ಪತ್ತೆಹಚ್ಚಬೇಕು ಎಂದು ಅವರು ಹೇಳಿದರು. ಎಸ್‌ಐಟಿಯನ್ನು ಸುಪ್ರೀಂಕೋರ್ಟ್ ಆದೇಶದನ್ವಯ ಗೋಧ್ರಾ ನಂತರದ ಗಲಭೆ ತನಿಖೆಗೆ ರಚಿಸಲಾಗಿದ್ದು, ನಾನಾವತಿ ಆಯೋಗವನ್ನು ಮೋದಿ ಸರ್ಕಾರ ಸ್ಥಾಪಿಸಿದೆಯೆಂದು ಹೇಳಿದ ವಘೇಲಾ, ನಾನಾವತಿ ಆಯೋಗಕ್ಕೆ ಸಹಕರಿಸಲು ಮೋದಿ ಸಿದ್ಧವಿದ್ದಾರಾದರೂ ಎಸ್‌ಐಟಿ ತನಿಖೆಗೆ ಆಕ್ಷೇಪಿಸುತ್ತಿದ್ದಾರೆಂದು ತಿಳಿಸಿದರು.
ಇದಲ್ಲದೇ ತಮ್ಮ ದಿನಚರಿಗಳಲ್ಲಿ ಸತ್ಯಾಂಶವನ್ನು ಬಹಿರಂಗಪಡಿಸಿದ ಇಬ್ಬರು ಐಪಿಎಸ್ ಅಧಿಕಾರಿಗಳಾಗ ಶ್ರೀಕುಮಾರ್ ಮತ್ತು ರಾಹುಲ್ ಶರ್ಮಾ ದಿನಚರಿಗಳ ಆಧಾರದ ಮೇಲೆ ಎಸ್‌ಐಟಿ ಪ್ರಕರಣ ದಾಖಲಿಸಬೇಕು ಎಂದು ವಘೇಲಾ ಹೇಳಿದರು. |