ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಗುರಿಯಿಟ್ಟುಕೊಂಡು ಮರಾಠಿಗರನ್ನು ಓಲೈಸಲು ಹೊರಟಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಹಾರಾಷ್ಟ್ರದವರದ್ದು ವಿಶಾಲ ಹೃದಯ; ಅವರು ದೇಶದ ಎಲ್ಲಾ ಕಡೆಯ ಜನರು ತಮ್ಮಲ್ಲಿ ಬಂದು ಬದುಕು ಸಾಗಿಸಲು ಅವಕಾಶ ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅವರು ಮುಂಬೈಯಲ್ಲಿ ಬಹುತೇಕ ದಕ್ಷಿಣ ಭಾರತದವರೇ ತುಂಬಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.
ದಕ್ಷಿಣ ಭಾರತದವರು, ಉತ್ತರ ಪ್ರದೇಶ, ಬಿಹಾರದ ವಲಸಿಗರು ಇಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಹೊಂದಿಕೊಂಡಿದ್ದು, ಅಭಿವೃದ್ಧಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲಾ ಸಮುದಾಯಗಳೂ ಶಾಂತಿ ಮತ್ತು ಸಹಬಾಳ್ವೆಯನ್ನು ಪಾಲಿಸುತ್ತಿವೆ ಎಂದು ಗೌಡ ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬರಲಿರುವ ವಿಧಾನಸಭಾ ಚುನಾವಣೆಗಳ ಬಗ್ಗೆ ಮಾತಿಗಿಳಿದ ಅವರು, ತಮ್ಮ ಪಕ್ಷವು ಬಡ ರೈತರ, ಜಮೀನುರಹಿತ ವಲಯದ ಕಾರ್ಮಿಕರ ಸಮಸ್ಯೆಗಳತ್ತ ಒತ್ತು ನೀಡಲಿದೆ ಎಂದರು.
"ಈಗಲೂ ಸಮಾಜದ ಕೆಳ ಹಂತದಲ್ಲೇ ಉಳಿದುಕೊಂಡಿರುವ ಬಡ ಮತ್ತು ತುಳಿತಕ್ಕೊಳಗಾದ ರೈತರ ಹಕ್ಕುಗಳಿಗಾಗಿ ತಮ್ಮ ಪಕ್ಷವು ಹೋರಾಡಲಿದೆ" ಎಂದು ಪಕ್ಷದ ನೀತಿಗಳನ್ನು ಗೌಡ ವಿವರಿಸಿದ್ದಾರೆ.
|