ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಶೋಫಿಯಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪ್ರತಿಪಕ್ಷವಾದ ಪಿಡಿಪಿ ಶಾಸಕರು ಕೋಲಾಹಲವನ್ನುಂಟು ಮಾಡಿದ್ದಲ್ಲದೆ, ಈ ಸಂದರ್ಭದಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬ್ ಮುಫ್ತಿ ತಾಳ್ಮೆ ಕಳೆದುಕೊಂಡು ಸ್ಪೀಕರ್ ಅವರ ಮೈಕ್ ಅನ್ನು ಕಿತ್ತೆಸೆದ ಘಟನೆ ನಡೆಯಿತು.
ಇಂದು ಬೆಳಿಗ್ಗೆ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ, ಮೇ ತಿಂಗಳಲ್ಲಿ ಸಂಭವಿಸಿದ ಇಬ್ಬರು ಮಹಿಳೆಯರ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಸಂದರ್ಭದಲ್ಲಿ ಸ್ಪೀಕರ್ ಅವರು ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದಾರೆಂದು ಆರೋಪಿಸಿದ ಮುಫ್ತಿ ತೀವ್ರ ಆಕ್ರೋಶದಿಂದ ಮೈಕ್ರೋಫೋನ್ ಅನ್ನು ಕಿತ್ತು ಎಸೆದರು.
ಇದರಿಂದ ಕೆಂಡಮಂಡಲರಾದ ಸ್ಪೀಕರ್ ಪಿಡಿಪಿ ಶಾಸಕರನ್ನು ಸದನದಿಂದ ಹೊರ ಹಾಕಲು ಆದೇಶಿಸಿ, ಕಲಾಪವನ್ನು ಮುಂದೂಡಿದರು. ಸ್ಪೀಕರ್ ಅವರ ದ್ವಂದ್ವ ನೀತಿಯನ್ನು ಖಂಡಿಸಿ ಪಿಡಿಪಿ ಸದಸ್ಯರು ಮುಫ್ತಿ ಅವರ ನೇತೃತ್ವದಲ್ಲಿ ಸದನದ ಹೊರಗೆ ಧರಣಿ ನಡೆಸುತ್ತಿದ್ದಾರೆ.
ಮೇ 29-30ರಂದು ಶ್ರೀನಗರದಿಂದ ಸಂಜೆ ಮನೆಗೆ ಹೊರಟ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು. ಇದರಲ್ಲಿ ಒಬ್ಬಾಕೆ ಗರ್ಭಿಣಿಯಾಗಿದ್ದಳು. ಮರುದಿನ ಇಬ್ಬರ ಶವ ಸಿಆರ್‌ಪಿಎಫ್ ಕ್ಯಾಂಪ್ ಸಮೀಪ ದೊರಕಿತ್ತು. ಈ ಕೊಲೆ ಮತ್ತು ಅತ್ಯಾಚಾರದ ಹಿಂದೆ ಯೋಧರ ಕೈವಾಡ ಇದೆ ಎಂಬುದು ಪಿಡಿಪಿ ಆರೋಪ. ಈ ಘಟನೆ ಕಳೆದ ಎರಡು ತಿಂಗಳಿನಿಂದ ಶ್ರೀನಗರದಲ್ಲಿ ಸಾಕಷ್ಟು ಹಿಂಸಾಚಾರ, ಬಂದ್‌ಗೆ ಕಾರಣವಾಗಿತ್ತು.