53 ಜನರನ್ನು ಬಲಿತೆಗೆದುಕೊಂಡ ಗೇಟ್ ವೇ ಆಫ್ ಇಂಡಿಯ ಮತ್ತು ಜವೇರಿ ಬಜಾರ್ ಅವಳಿ ಸ್ಫೋಟಗಳನ್ನು ಕುರಿತ ಅಪರೂಪದಲ್ಲಿ ಅಪರೂಪ ಪ್ರಕರಣದಲ್ಲಿ ಮುಂಬೈ ವಿಶೇಷ ಕೋರ್ಟ್ ಸೋಮವಾರ ತನ್ನ ತೀರ್ಪನ್ನು ಕೊಡುವುದೆಂದು ನಿರೀಕ್ಷಿಸಲಾಗಿದೆ. ಎರಡು ಕ್ಯಾಬ್‌ಗಳಲ್ಲಿ ದೂರನಿಯಂತ್ರಕಗಳನ್ನು ಹುದುಗಿಸಿದ ಪ್ರಕರಣದಲ್ಲಿ ಲಷ್ಕರೆ ತೊಯ್ಬಾದ ಭಯೋತ್ಪಾದಕ ಘಟಕ ಭಾಗಿಯಾಗಿತ್ತು.
ಮುಂಬೈ ಸರಣಿ ಸ್ಫೋಟಗಳಿಗೆ ಸಂಬಂಧಿಸಿದಂತೆ ವಿಶೇಷ ಟಾಡಾ ಕೋರ್ಟ್ 2007ರಲ್ಲಿ ವಿಚಾರಣೆ ಅಂತ್ಯಗೊಳಿಸಿ ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ 100 ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಬಳಿಕ ಭಯೋತ್ಪಾದನೆ ಪ್ರಕರಣದಲ್ಲಿ ಬಹುದಿನಗಳಿಂದ ನಿರೀಕ್ಷಿಸಿರುವ ತೀರ್ಪು ಇದಾಗಿದೆ. 2002 ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಮುಸ್ಲಿಮರ ಸಾವುನೋವಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಯೋತ್ಪಾದನೆ ದಾಳಿಗಳನ್ನು ನಡೆಸಲಾಗಿತ್ತು.
ತನಿಖೆಗಳ ಬಳಿಕ ಮುಂಬೈ ಪೊಲೀಸರು ಮುಖ್ಯ ಆರೋಪಿ ಮೋಹಮದ್ ಹನೀಫ್ ಸಯದ್, ಅವನ ಪತ್ನಿ ಫಾಹಿಮಿದಾ, ಅಶ್ರತ್ ಶಫೀಖ್ ಅನ್ಸಾರಿ, ಜಹೀದ್ ಯುಸುಫ್ ಪಾಟ್ನಿ, ರಿಜ್ವಾನ್ ಲಡ್ಡೂವಾಲಾ ಮತ್ತು ಶೇಖ್ ಬ್ಯಾಟರಿವಾಲಾರನ್ನು ಬಂಧಿಸಿದ್ದರು.ನಜೀರ್ ಎಂದು ಗುರುತಿಸಲಾದ ಒಬ್ಬ ಆರೋಪಿ ಮತ್ತು ಸ್ಫೋಟಗಳ ಸೂತ್ರಧಾರಿ 2003 ಸೆಪ್ಟೆಂಬರ್‌ನಲ್ಲಿ ಮಾತುಂಗಾ ಉಪನಗರದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆಂದು ಆರೋಪಿ ಪರ ವಕೀಲ ಕುಂಜುರಾಮನ್ ತಿಳಿಸಿದ್ದಾರೆ.
ಎಲ್ಲ ಆರೋಪಿಗಳ ವಿರುದ್ಧ ಒಟ್ಟು ನಾಲ್ಕು ಪ್ರಕರಣ ದಾಖಲಿಸಲಾಗಿದ್ದು, 101 ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆಯೆಂದು ಕುಂಜುರಾಮನ್ ತಿಳಿಸಿದ್ದಾರೆ. ಗೇಟ್ ವೇ ಆಫ್ ಇಂಡಿಯ ಮತ್ತು ಜವೇರಿ ಬಜಾರ್‌ನಲ್ಲಿ ಅವಳಿ ಸ್ಫೋಟಗಳಿಂದ 53 ಜನರ ಹತ್ಯೆ, ಗಾಟ್ಕೋಪರ್ ರೈಲ್ವೆ ನಿಲ್ದಾಣದ ಹೊರಗೆ ಸ್ಫೋಟದಲ್ಲಿ ಇಬ್ಬರ ಸಾವು, 31 ಜನರಿಗೆ ಗಾಯ, ಸಾರ್ವಜನಿಕ ಬೆಸ್ಟ್ ಬಸ್ಸಿನಲ್ಲಿ ಬಾಂಬ್ ಹುದುಗಿಸಿದ ನಾಲ್ಕನೇ ಪ್ರಕರಣದಲ್ಲಿ ಬಾಂಬ್ ಸ್ಫೋಟಿಸಲು ವಿಫಲವಾಗಿತ್ತು. |