ಮುಂಬೈ ಅವಳಿ ಸ್ಫೋಟ; ಮೂರು ಆರೋಪಿತರು ದೋಷಿ
![](/img/cm/searchGlass_small.png)
ಆಗೋಸ್ಟ್ 4ರಂದು ಶಿಕ್ಷೆಯ ಪ್ರಮಾಣ ಪ್ರಕಟ...
ಮುಂಬೈ, ಸೋಮವಾರ, 27 ಜುಲೈ 2009( 17:35 IST )
2003ರಲ್ಲಿ ವಾಣಿಜ್ಯ ನಗರಿಯ ಗೇಟ್ ವೇ ಆಫ್ ಇಂಡಿಯ ಮತ್ತು ಜವೇರಿ ಬಜಾರ್ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮುಂಬೈ ವಿಶೇಷ ಪೋಟಾ ಕೋರ್ಟ್, ಲಷ್ಕರ್ ಎ ತೊಯ್ಬಾದ ಮೂರು ಮಂದಿ ಆರೋಪಿಗಳು ದೋಷಿ ಎಂದು ತೀರ್ಪು ನೀಡಿದ್ದು, ಆಗೋಸ್ಟ್ 4ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ನ್ಯಾಯಪೀಠ ತಿಳಿಸಿದೆ.
ನಗರದ ಪ್ರಮುಖ ಭಾಗದಲ್ಲಿ ನಡೆದ ಈ ಅವಳಿ ಸ್ಫೋಟದಲ್ಲಿ 52 ಜನರು ಬಲಿಯಾಗಿದ್ದು, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಪ್ರಕರಣದ ಪ್ರಮುಖ ರೂವಾರಿಗಳಾದ ಆಟೋ ಡ್ವೈವರ್ ಮೊಹಮ್ಮದ್ ಹನೀಫ್ ಸೈಯದ್(46), ಅವನ ಪತ್ನಿ ಫಾಹಿಮಿದಾ (43) ಹಾಗೂ ಅಶ್ರತ್ ಅನ್ಸಾರಿ(32) ದೋಷಿ ಎಂದು ತೀರ್ಪು ನೀಡಿದೆ. ನಾಲ್ಕನೇ ಆರೋಪಿ ಸಾಕ್ಷಿ ಎಂದು ಪರಿಗಣಿಸಲಾಗಿದೆ.
ವಿಚಾರಣೆ ವೇಳೆ 103 ಜನರ ಸಾಕ್ಷಿಯನ್ನು ಪಡೆಯಲಾಗಿದ್ದು, ಬಂಧಿತ ನಾಲ್ಕು ಮಂದಿ ವಿರುದ್ಧ ಪೋಟಾ ಕಾಯ್ದೆಯಡಿ ಹತ್ಯೆ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿತ್ತು. ಇದರಲ್ಲಿ ಒಬ್ಬ ಆರೋಪಿ ಸಾಕ್ಷಿಯಾಗಿ ಪರಿವರ್ತಿತನಾಗಿರುವುದಾಗಿ ಸರ್ಕಾರಿ ವಕೀಲರಾದ ಉಜ್ವಲ್ ನಿಕ್ಕಮ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. ದೋಷಿತರಾಗಿರುವ ಮೂರು ಮಂದಿ ಆರೋಪಿಗಳಿಗೆ ಪ್ರಾಸಿಕ್ಯೂಷನ್ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಕೋರಿದೆ.
ಮುಂಬೈ ಸರಣಿ ಸ್ಫೋಟಗಳಿಗೆ ಸಂಬಂಧಿಸಿದಂತೆ ವಿಶೇಷ ಟಾಡಾ ಕೋರ್ಟ್ 2007ರಲ್ಲಿ ವಿಚಾರಣೆ ಅಂತ್ಯಗೊಳಿಸಿ ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ 100 ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಬಳಿಕ ಭಯೋತ್ಪಾದನೆ ಪ್ರಕರಣದಲ್ಲಿ ಬಹುದಿನಗಳಿಂದ ನಿರೀಕ್ಷಿಸಿರುವ ತೀರ್ಪು ಇದಾಗಿತ್ತು. 2002 ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಮುಸ್ಲಿಮರ ಸಾವುನೋವಿಗೆ ಪ್ರತೀಕಾರ ತೀರಿಸಿಕೊಳ್ಳಲು ಲಷ್ಕರ್ ಈ ಭಯೋತ್ಪಾದನೆ ದಾಳಿಗಳನ್ನು ನಡೆಸಿತ್ತು.
ತನಿಖೆಗಳ ಬಳಿಕ ಮುಂಬೈ ಪೊಲೀಸರು ಮುಖ್ಯ ಆರೋಪಿ ಮೋಹಮದ್ ಹನೀಫ್ ಸಯದ್, ಅವನ ಪತ್ನಿ ಫಾಹಿಮಿದಾ, ಅಶ್ರತ್ ಶಫೀಖ್ ಅನ್ಸಾರಿ, ಜಹೀದ್ ಯುಸುಫ್ ಪಾಟ್ನಿ, ರಿಜ್ವಾನ್ ಲಡ್ಡೂವಾಲಾ ಮತ್ತು ಶೇಖ್ ಬ್ಯಾಟರಿವಾಲಾ ಹಾಗೂ 16ವರ್ಷದ ಬಾಲಕಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು.
ನಂತರ ನ್ಯಾಯಾಲಯ ಬಾಲಕಿಯನ್ನು ನಿರ್ದೋಷಿ ಎಂದು ಘೋಷಿಸಿತ್ತು. ಅನ್ಸಾರಿ ಮತ್ತು ಶೇಖ್ ಬ್ಯಾಟರಿವಾಲಾನನ್ನು ಪೋಟಾ ಪುನರ್‌ಪರಿಶೀಲನಾ ಸಮಿತಿ ಕ್ಲೀನ್ ಚಿಟ್ ನೀಡಿತ್ತು. ನಜೀರ್ ಎಂದು ಗುರುತಿಸಲಾದ ಒಬ್ಬ ಆರೋಪಿ ಮತ್ತು ಸ್ಫೋಟಗಳ ಸೂತ್ರಧಾರಿ 2003 ಸೆಪ್ಟೆಂಬರ್‌ನಲ್ಲಿ ಮಾತುಂಗಾ ಉಪನಗರದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದ.
ಗೇಟ್ ವೇ ಆಫ್ ಇಂಡಿಯ ಮತ್ತು ಜವೇರಿ ಬಜಾರ್‌ನಲ್ಲಿ ಅವಳಿ ಸ್ಫೋಟಗಳಿಂದ 52 ಜನರ ಹತ್ಯೆ, ಗಾಟ್ಕೋಪರ್ ರೈಲ್ವೆ ನಿಲ್ದಾಣದ ಹೊರಗೆ ಸ್ಫೋಟದಲ್ಲಿ ಇಬ್ಬರ ಸಾವು, 31 ಜನರಿಗೆ ಗಾಯ, ಸಾರ್ವಜನಿಕ ಬೆಸ್ಟ್ ಬಸ್ಸಿನಲ್ಲಿ ಬಾಂಬ್ ಹುದುಗಿಸಿದ ನಾಲ್ಕನೇ ಪ್ರಕರಣದಲ್ಲಿ ಬಾಂಬ್ ಸ್ಫೋಟಿಸಲು ವಿಫಲವಾಗಿತ್ತು.