ನಿಮ್ಮ ವಯಸ್ಸಿನಲ್ಲಿ ವಿಸ್ಕಿ ಕುಡಿಯುವುದು ಒಳ್ಳೆಯದಲ್ಲ ಎಂದು ವಿತ್ತಸಚಿವ ಪ್ರಣವ್ ಮುಖರ್ಜಿ ಅವರು ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಅವರಿಗೆ ಸಲಹೆ ಮಾಡಿದಾಗ ಸದನ ನಗೆಗಡಲಲ್ಲಿ ಮುಳುಗಿದ ಪ್ರಸಂಗ ಸೋಮವಾರ ನಡೆದಿದೆ.
ಆಲ್ಕೋಹಾಲ್ ಸೇವಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಣಕಾಸು ಖಾತೆಯ ಚರ್ಚೆ ಅಂತ್ಯಗೊಳ್ಳುತ್ತಿದ್ದಂತೆ ಮುಖರ್ಜಿ ಅವರು ಸಿಂಗ್‌ಗೆ ಹಿತವಚನ ಹೇಳಿದರು. ಚರ್ಚೆಯಲ್ಲಿ ಪಾಲ್ಗೊಂಡಿದ್ದ 71 ವರ್ಷ ಇಳಿವಯಸ್ಸಿನ ಜಸ್ವಂತ್ ಸಿಂಗ್ ಆದಾಯತೆರಿಗೆ ಮಿತಿಯನ್ನು 10,000 ರೂ. ಏರಿಸಿದ್ದು ತೀರಾ ಕಡಿಮೆಯಾಗಿದ್ದು, ವಿಸ್ಕಿ ಸೀಸೆಯೊಂದರ ಖರೀದಿಗೆ ಸಹ ಸಾಕಾಗುವುದಿಲ್ಲ ಎಂದು ಹೇಳಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ ಪ್ರಣವ್ ಮುಖರ್ಜಿ, ತಾವು ಸ್ವತಃ ಪೈಪ್ ಸೇದುವ ಚಟವನ್ನು ಬಿಟ್ಟಿದ್ದು, ಈ ವಯಸ್ಸಿನಲ್ಲಿ ಸಿಂಗ್ ಅವರು ವಿಸ್ಕಿ ಕುಡಿಯುವ ಚಟ ಒಳ್ಳೆಯದಲ್ಲ ಎಂದು ಹೇಳಿದಾಗ ಸದನದಲ್ಲಿ ನಗೆಯ ಬುಗ್ಗೆ ಚಿಮ್ಮಿ ಅನೇಕ ಸಂಸದರು ಮೇಜನ್ನು ಕುಟ್ಟಿ ಹರ್ಷ ವ್ಯಕ್ತಪಡಿಸಿದರು.