ಹಿಸ್ಸಾರ್: ತನ್ನ ಮೊದಲ ಪತ್ನಿಯನ್ನು ತೊರೆದು ಇಸ್ಲಾಂ ಧರ್ಮಕ್ಕೆ ಪರಿವರ್ತನೆಹೊಂದಿ ಮತ್ತೊಂದು ವಿವಾಹವಾಗಿದ್ದ ಹರ್ಯಾಣದ ಮಾಜಿ ಉಪಮುಖ್ಯಮಂತ್ರಿ ಚಂದ್ರಮೋಹನ್ ಅವರು ಇದೀಗ ಮರಳಿ ತಮ್ಮ ಮಾತೃ ಧರ್ಮಕ್ಕೆ ಪರಿವರ್ತನೆ ಹೊಂದಲು ಮುಂದಾಗಿದ್ದಾರೆ.
ತನ್ನ ತಾಯಿ ಜಸ್ಮಾದೇವಿ ಅಸಂತುಷ್ಟರಾಗಿರುವ ಕಾರಣ ತಾನು ಮತ್ತೆ ತನ್ನ ಬಿಶ್ನೋಯಿ ಸಮುದಾಯಕ್ಕೆ ಮರಳುವುದಾಗಿ ಅವರು ಹೇಳಿದ್ದಾರೆ. ತನ್ನ ತಾಯಿಯನ್ನು ನೋಯಿಸಲು ಇಚ್ಛಿಸದೆ ತಾನು ಇಸ್ಲಾಮಿನಿಂದ ಮರುಪರಿವರ್ತನೆ ಹೊಂದಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಅದಲ್ಲದೆ, ಮುಂಬರುವ ಚುನಾವಣೆಯಲ್ಲಿ ತಾನು ಪಂಚಕುಲ ಕ್ಷೇತ್ರದಿಂದ ಸ್ಫರ್ಧಿಸುವುದಾಗಿ ಹೇಳಿದ್ದಾರೆ. ನಾನು ಇದೀಗಾಗಲೇ ತನ್ನ ಮಾಫಿನಾಮ(ಕ್ಷಮಾಪಣೆ)ವನ್ನು ಬಿಶ್ನೋಯಿ ಮತ್ತು ಮುಸ್ಲಿಂ ಧಾರ್ಮಿಕ ನಾಯಕರಿಗೆ ಕಳುಹಿಸಿದ್ದೇನೆ ಮತ್ತು ಅವರು ಕ್ಷಮಿಸುವರೆಂದು ತಾನು ಭಾವಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.
ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರಮೋಹನ್, ತನ್ನ ಪತ್ನಿ ಅನುರಾಧ ಬಾಲಿ ಅಲಿಯಾಸ್ ಫಿಜಾ ಮೊಹಮ್ಮದ್ ಅವರೊಂದಿಗೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಫಿಜಾ ಒಮ್ಮೆಯೂ ತನ್ನ ಆರೋಗ್ಯ ವಿಚಾರಿಸಿಲ್ಲ. ಹಾಗೂ ತಾನು ಆಕೆಯೊಂದಿಗಿನ ಎಲ್ಲಾ ಸಂಬಂಧ ಕಡಿದುಕೊಂಡಿರುವುದಾಗಿ ಹೇಳಿದರು.
ಇದು ಇನ್ನೊಂದು ನಾಟಕ ಆದರೆ ಚಂದ್ರಮೋಹನ್ ಅವರು ತನ್ನ ಮಾತೃ ಧರ್ಮಕ್ಕೆ ಮರಳಲು ಮುಂದಾಗಿರುವುದು ಒಂದು ನಾಟಕ ಎಂದು ಹೇಳಿರುವ ಅನುರಾಧಾ ಬಾಲಿ, ಚಂದ್ರಮೋಹನ್ ಅವರನ್ನು ತನ್ನ ಮನಸ್ಸಿನಿಂದ ಕಿತ್ತೆಸೆದಿರುವುದಾಗಿ ಹೇಳಿದ್ದಾರೆ.
"ಈತ ಮೊದಲು ನನ್ನ ಭಾವನೆಗಳೊಂದಿಗೆ ಆಟವಾಡಿದರು. ಇದೀಗ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ಹರ್ಯಾಣದ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅನುರಾಧ ದೂರಿದ್ದಾರೆ.
ಹರ್ಯಾಣದ ಮಾಜಿಮುಖ್ಯಮಂತ್ರಿಯಾಗಿದ್ದ ಚಂದ್ರ ಮೋಹನ್ ಅವರು ಈ ವಿವಾಹದಿಂದಾಗಿ ತನ್ನ ಸ್ಥಾನ ಕಳೆದುಕೊಂಡಿದ್ದರು. ಅಲ್ಲದೆ ಪುತ್ರನ ಕೃತ್ಯದಿಂದ ಕೋಪಗೊಂಡ ಅವರ ತಂದೆ ಭಜನ್‌ಲಾಲ್ ಅವರು ಮಗನನ್ನು ಮನೆಯಿಂದ ಹೊರಗೆ ಹಾಕಿದ್ದರು. ಸಹಜವಾಗೇ ಮೊದಲ ಪತ್ನಿ ದೂರಸರಿದಿದ್ದರು.
ಸಹಾಯಕ ಅಡ್ವೋಕೇಟ್ ಜನರಲ್ ಆಗಿದ್ದ ಅನುರಾಧಬಾಲಿ ಪ್ರೇಮ ಪಾಶಕ್ಕೆ ಬಿದ್ದಿದ್ದ ಚಂದ್ರ ಮೋಹನ್ ಅವರು ಇಸ್ಲಾಮಿಗೆ ಪರಿವರ್ತನೆಗೊಂಡು ಆಕೆಯನ್ನು ವಿವಾಹವಾಗಿದ್ದರು. ಇವರ ವಿವಾಹ ಬಳಿಕ ಅನೇಕ ತಿರುವು ಹಾಗೂ ಪ್ರಕರಣಗಳಿಗೆ ಕಾರಣವಾಗಿತ್ತು.