ಸಂಘಟಿತ ಅಪರಾಧಗಳ ಗುಜರಾತ್ ನಿಯಂತ್ರಣ ಕಾಯ್ದೆ ಮಸೂದೆಯನ್ನು ಗುಜರಾತ್ ವಿಧಾನಸಭೆ ಮಂಗಳವಾರ ಜಾರಿಗೆ ತಂದಿದ್ದು, ಸಂಘಟಿತ ಅಪರಾಧಗಳು ಎಂಬಲ್ಲೆಲ್ಲ 'ಉಗ್ರವಾದ' ಎಂಬ ಶಬ್ದವನ್ನು ಸೇರಿಸಿದೆ.
ಈ ಹಿಂದೆ ಶಾಸನ ಸಭೆಯು ಪಾಸು ಮಾಡಿದ್ದ ಮಸೂದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸೂಚಿಸಿದ್ದ ಮೂರು ಬದಲಾವಣೆಯ ಶಿಫಾರಸ್ಸನ್ನು ಮಸೂದೆಯ ಅಂಗೀಕಾರದ ವೇಳೆ ನಿರಾಕರಿಸಲಾಗಿದೆ.
ಭಯೋತ್ಪಾದನೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಕಾನೂನನ್ನು ಹೊಂದಿರದ ಕಾರಣ ಗುಜರಾತ್ ಸರ್ಕಾರವು ಉಗ್ರವಾದ ಎಂಬ ಶಬ್ದವನ್ನು ಸೇರಿಸಿದೆ.
ಗುಜರಾತ್ ಭಯೋತ್ಪಾದನಾ ನಿಯಂತ್ರಣ ಮಸೂದೆಯನ್ನು 2003ರಲ್ಲಿ ಮಂಡಿಸಿದ್ದ ವೇಳೆ ಭಯೋತ್ಪಾದನಾ ನಿಗ್ರಹ ಕಾಯ್ದೆ(ಪೋಟಾ) ಜಾರಿಯಲ್ಲಿದ್ದ ಕಾರಣ ಭಯೋತ್ಪಾನೆ ಎಂಬ ಶಬ್ದ ಸೇರಿಸುವ ಅವಶ್ಯಕತೆ ಇರಲಿಲ್ಲ ಎಂದು ಸರ್ಕಾರ ಹೇಳಿದೆ. ಇದೀಗ ಈ ಮಸೂದೆಯನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಳುಹಿಸಲಾಗಿದೆ.
ಈ ಹಿಂದೆ ಎರಡು ಬಾರಿ ಮಸೂದೆಯನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದ ವೇಳೆ ಮರುಪರಿಶೀಲಿಸುವಂತೆ ಹಿಂದಕ್ಕೆ ಕಳುಹಿಸಲಾಗಿತ್ತು.
ಮಸೂದೆಗೆ ಅಂಗೀಕಾರ ನೀಡದೆ ಹಿಂದೆ ಕಳುಹಿಸುವ ಮೂಲಕ ಕೇಂದ್ರವು ಪಕ್ಷಪಾತಿತನ ತೋರಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದರು. ಕೇಂದ್ರವು ಮೂರು ತಿದ್ದುಪಡಿಗಳನ್ನು ಸೂಚಿಸಿತ್ತು.
ಕೇಂದ್ರವು ತಿದ್ದುಪಡಿಗೆ ಸಲಹೆ ನೀಡಿರುವುದು ರಾಜಕೀಯ ಪ್ರೇರಿತ. ಕೇಂದ್ರವು ಯಾಕೆ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಮೋದಿ ಪ್ರಶ್ನಿಸಿದ್ದಾರೆ.