ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿ ಪಠ್ಯಪುಸ್ತಕದಲ್ಲಿ ಪ್ರವಾದಿ ಚಿತ್ರ: ಭುಗಿಲೆದ್ದ ವಿವಾದ (Prophet Mohammed | Uttar Pradesh | textbook | Minorities Commission)
ಯುಪಿ ಪಠ್ಯಪುಸ್ತಕದಲ್ಲಿ ಪ್ರವಾದಿ ಚಿತ್ರ: ಭುಗಿಲೆದ್ದ ವಿವಾದ
ಲಕ್ನೋ, ಮಂಗಳವಾರ, 28 ಜುಲೈ 2009( 17:55 IST )
ಅಧಿಕೃತವಾಗಿ ಸೂಚಿತಗೊಂಡಿರುವ ಪಠ್ಯಪುಸ್ತಕದಲ್ಲಿ ಪ್ರವಾದಿ ಮೊಹಮ್ಮದ್ ಅವರ ಚಿತ್ರ ಪ್ರಕಟವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಪಸಂಖ್ಯಾತರ ಆಯೋಗವು, ಈ ಕುರಿತು ಮಂಗಳವಾರ ರಾಜ್ಯ ಸರ್ಕಾರಕ್ಕೆ ಕಾರಣ ಕೇಳಿ ನೋಟೀಸು ನೀಡಿದೆ.
ಪ್ರವಾದಿ ಚಿತ್ರಪ್ರಕಟಣೆಯನ್ನು 'ದೈವನಿಂದನೆ' ಎಂದು ಇಸ್ಲಾಂ ಪರಿಗಣಿಸುವ ಕಾರಣ ಈ ಪ್ರಕರಣವು ಇಸ್ಲಾಂ ಪಂಡಿತರು ಹಾಗೂ ಧರ್ಮಗುರುಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ತೀವ್ರ ಕೋಲಾಹಲ ಮೂಡಿಸಿದೆ.
"ಬಿ.ಎಡ್ ಕೋರ್ಸ್‌ಗಳ ಪಠ್ಯಪುಸ್ತಕಗಳಲ್ಲಿ ಇದು ಪ್ರಕಟವಾಗಿದ್ದು, ಈ ಪಠ್ಯ ಪುಸ್ತಕ ಪ್ರಕಟಣೆಗೆ ಉನ್ನತ ಶಿಕ್ಷಣ ಇಲಾಖೆಯು ಹೇಗೆ ಅನುಮತಿ ನೀಡಿದೆ ಎಂಬ ಕುರಿತು ನಾವು ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದೇವೆ" ಎಂದು ಅಲ್ಪಸಂಖ್ಯಾತ ಆಯೋಗಕ್ಕೆ ಹೊಸತಾಗಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಸ್.ಎಂ.ಎ ಕಾಜ್ಮಿ ಹೇಳಿದ್ದಾರೆ. ಫೈಜಾಬಾದ್ ಮೂಲದ ರಾಮ್ ಮನೋಹರ್ ಲೋಹಿಯಾ ಅವದ್ ವಿಶ್ವವಿದ್ಯಾನಿಲಯದ ಬಿ.ಎಡ್ ಕಾಲೇಜಿನ ಪಠ್ಯಪುಸ್ತಕದಲ್ಲಿ ಪ್ರವಾದಿ ಚಿತ್ರ ಪ್ರಕಟವಾಗಿದೆ.
ಕರಣ್ ಸಿಂಗ್ ಎಂಬ ನಿವೃತ್ತ ವಿಶ್ವವಿದ್ಯಾನಿಲಯ ಪ್ರೊಫೆಸರ್ ಬರೆದಿರುವ 'ಉದಯಮಾನ್ ಭಾರತೀಯ ಸಮಾಜ್ ಕೆ ಶಿಕ್ಷಕ್(ಉದಯೋನ್ಮುಕ ಭಾರತೀಯ ಸಮಾಜದಲ್ಲಿ ಶಿಕ್ಷಕರು) ಎಂಬ ಪುಸ್ತಕವನ್ನು ಲಖಿಂಪುರ ಮೂಲದ ಗೋವಿಂದ್ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು ಈ ಪುಸ್ತಕದಲ್ಲಿ ಪ್ರವಾದಿ ಚಿತ್ರ ಪ್ರಕಟಿಸಲಾಗಿದೆ.
ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ವಿದ್ವಾಂಸರ ಸಭೆಯನ್ನು ಇಲ್ಲಿನ ಇಸ್ಲಾಮಿಕ್ ಕೇಂದ್ರದಲ್ಲಿ ಸೋಮವಾರ ಕರೆಯಲಾಗಿತ್ತು. ಲಕ್ನೋದ ನಾಯಿಬ್ ಹಾಗೂ ಲಕ್ನೋದ ಅತ್ಯಂತ ಹಳೆಯ ಇಸ್ಲಾಮಿಕ್ ಸೆಮಿನರಿ ಫಿರಂಗಿ ಮಹಲ್‌ನ ಮುಖ್ಯಸ್ಥ ಇಮಾಮ್ ಮೌಲಾನಾ ಖಾಲಿದ್ ರಶೀದ್, ಅಖಿಲ ಭಾರತೀಯ ಶಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷ ಮೌಲಾನಾ ಅಟಹರ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
"ಮೊದಲಾಗಿ ಪ್ರವಾದಿ ಅವರ ಚಿತ್ರ ಪ್ರಕಟಣೆಯು ಇಸ್ಲಾಮಿ ವಿರೋಧಿ. ಎರಡನೆಯದಾಗಿ ಪ್ರವಾದಿ ಅವರ ಚಿತ್ರವನ್ನು ಇಡೀ ವಿಶ್ವದಲ್ಲಿ ಯಾರೂ ಹೊಂದಿಲ್ಲದ ಕಾರಣ ಇದು ಸಂಪೂರ್ಣ ಕಾಲ್ಪನಿಕವಾದುದು" ಎಂಬುದಾಗಿ ಮೌಲಾನಾ ಖಾಲಿದ್ ರಶೀದ್ ಹೇಳಿದ್ದಾರೆ.
"ಈ ಹಿಂದೆ ಡೆನ್ಮಾರ್ಕಿನ ವ್ಯಂಗ್ಯಚಿತ್ರಕಾರನೊಬ್ಬ ಪ್ರವಾದಿಯವರ ಚಿತ್ರವನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದ. ಇದೀಗ ಈ ಪುಸ್ತಕ. ಪಠ್ಯಪುಸ್ತಕದಲ್ಲಿ ಯಾವುದೇ ಅವಮಾನಕಾರಿ ವಿಚಾರವಿಲ್ಲದಿದ್ದರೂ, ವಿಷಯದ ಸೂಕ್ಷ್ಮತೆಯ ಹಿನ್ನೆಲೆಯಲ್ಲಿ ಪುಸ್ತಕವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
ಪುಸ್ತಕವು ಮಾರುಕಟ್ಟೆಯಲ್ಲಿ ಚಲಾವಣೆಗೆ ಬರುವ ಮುಂಚಿತವಾಗಿ ಈ ಚಿತ್ರವನ್ನು ತೆಗೆದು ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.