ಮನೆಗೆಲಸದ ಮಹಿಳೆಯೊಬ್ಬಳು ತನ್ನ ನವಜಾತ ಶಿಶುವನ್ನು ಬಚ್ಚಲು ಮನೆ ಕಿಟಿಕಿಯಿಂದ ಹೊರಗೆಸೆದಿರುವ ಘಟನೆ ಮಂಗಳವಾರ ಸಂಭವಿಸಿದೆ.
ನಗರದ ವಾಟ್‌ಗಂಜ್ ಎಂಬಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಗೆಲಸಕ್ಕಿದ್ದ ಶಬ್ನಂ ಎಂಬ ಮಹಿಳೆಯು ಮಂಗಳವಾರ ಮುಂಜಾನೆ ಬಚ್ಚಲಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಬಳಿಕ ಆ ಮಗುವನ್ನು ಹೊರಗಿನ ರಸ್ತೆಗೆ ಬಚ್ಚಲಿನ ಕಿಟಿಕಿಯಿಂದ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಮಗುವನ್ನು ಕಂಡಿರುವ ನೆರೆಹೊರೆಯವರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಮಗುವಿನ ತಾಯಿ ಶಬ್ನಂ ಹೇಳುವಂತೆ, ಆಕೆಗೆ ನಾರ್ಮಲ್ ಡೆಲಿವರಿ ಆಗಿತ್ತು. ಆದರೆ ಮಗು ಸತ್ತು ಹುಟ್ಟಿದ್ದನ್ನು ಕಂಡು ಈ ಮಗುವನ್ನು ಕಿಟಿಕಿಯಿಂದ ಹೊರಗೆಸೆದಳಂತೆ. ಇದಕ್ಕೆ ಕಾರಣ ತಾನು ಎರಡು ತಿಂಗಳ ಹಿಂದಷ್ಟೆ ಗಳಿಸಿದ ಕೆಲಸವನ್ನು ಕಳೆದುಕೊಳ್ಳುವ ಭಯ.
"ಆಕೆ ತುಂಬ ತೆಳ್ಳಗಿದ್ದು, ಯಾವಾಗಲೂ ಬುರ್ಖಾ ಧರಿಸಿರುತ್ತಿದ್ದಳು. ಹಾಗಾಗಿ ಆಕೆ ಗರ್ಭಿಣಿ ಎಂಬುದು ನಮಗೆ ತಿಳಿದಿರಲಿಲ್ಲ. ಒಂದು ವೇಳೆ ಆಕೆ ಗರ್ಭಿಣಿ ಎಂಬುದು ನಮಗೆ ತಿಳಿಯುತ್ತಿದ್ದರೆ, ಆಕೆಯ ಕುರಿತು ಸೂಕ್ತ ಕಾಳಜಿ ವಹಿಸುತ್ತಿದ್ದೆವು" ಎಂದು ಆ ಮಹಿಳೆ ಕೆಲಸಕ್ಕಿದ್ದ ಮನೆಯ ಮಾಲಕರು ಹೇಳಿದ್ದಾರೆ.
ಬಿಹಾರದ ಸಮಸ್ಟಿಪುರದ ನಿವಾಸಿಯಾಗಿರುವ ಮಹಿಳೆಯ ತನ್ನ ಪತಿಯ ಹಿಂಸಾಚಾರ ತಾಳಲಾಗದೆ ಮನೆತೊರೆದು ಬಂದಿದ್ದು, ಉದ್ಯಮಿಯೊಬ್ಬರ ಮನೆಯಲ್ಲಿ ಕೆಸಕ್ಕೆ ಸೇರಿಕೊಂಡಿದ್ದಳು ಎಂದು ಹೇಳಲಾಗಿದೆ.