ಅವರು ಕೇಳಿದ್ದು ವೆಜ್ ರೋಲ್. ಅವರಿಗೆ ಕೊಟ್ಟಿದ್ದೂ ವೆಜ್ ಎಂದೇ ಬರೆದಿದ್ದ ವೆಜಿಟೇಟೇರಿಯನ್ ರೋಲ್. ಆದರೆ ಒಳಗೆ ಮಾತ್ರ ಕೋಳಿ ಮಾಂಸದ ತುಂಡುಗಳು! ಈ ಅನುಭವವಾದದ್ದು ಓಂಕಾರ್ ಶುಕ್ಲಾ ಎಂಬ ದೆಹಲಿಯ ನಿವಾಸಿಗೆ, ಅವರು ಕಳೆದ ವಾರ ತನ್ನ ತಂದೆಯೊಂದಿಗೆ ಮುಂಬೈನಿಂದ ಗೋಏರ್‌ನ ಜಿ8-375 ವಿಮಾನದಲ್ಲಿ ಪ್ರಯಾಣಿಸಿದ ವೇಳೆ.
ವೆಜ್ ಎಂದು ಮಾರ್ಕ್ ಮಾಡಿದ್ದ ವೆಜ್ ರೋಲ್ ಬಿಡಿಸಿ ಅದನ್ನು ಸುಮಾರು ಅರ್ಧದಷ್ಟು ತಿಂದ ಬಳಿಕವಷ್ಟೆ ಅದು ವೆಜ್ ಅಲ್ಲ ನಾನ್ ವೆಜ್ ಅಂತ ಅವರಿಗೆ ತಿಳಿಯಿತು. ಅಪ್ಪಟ ಸಸ್ಯಾಹಾರಿಯಾಗಿರುವ ಶುಕ್ಲಾರಿಗೆ ಇದರಿಂದ ಆಘಾತವಾಗಿದ್ದು ಈ ಕುರಿತು ದೂರು ನೀಡಲು ವಿಮಾನದ ಸಿಬ್ಬಂದಿಗಳಿಗೆ ದೂರು ನೀಡಲು ಮುಂದಾದರೆ, ಅವರಿಂದ ಯಾವುದೇ ಸಹಾಯವೂ ಲಭಿಸಲಿಲ್ಲ. ವಿಮಾನ ಕೆಳಗಿಳಿದ ಮೇಲೆ ವಿಮಾನ ಕ್ಯಾಪ್ಟನ್ ಅವರನ್ನು ಭೇಟಿ ಮಾಡಲು ಅವರು ಪ್ರಯತ್ನಿಸಿದಾಗ ಸಿಬ್ಬಂದಿ ಅತ್ಯಂತ ಕೆಟ್ಟದಾಗಿ ವರ್ತಿಸಿದ್ದು, ಇವರ ಮೇಲೆ ಭದ್ರತಾ ಸಿಬ್ಬಂದಿಗಳನ್ನು ಛೂ ಬಿಟ್ಟಿದ್ದರು ಎಂಬುದಾಗಿ ದೂರಿದ್ದಾರೆ.
"ವಿಮಾನ ಹಾರಿಸಲು ಆರಂಭಿಸಿದ ಬಳಿಕ ನಾನು ಕೆಫೆ ಕಾಫಿ ಡೇ ಉತ್ಪನ್ನವಾಗಿರುವ ವೆಜ್ ರೋಲ್ ಹಾಗೂ ಜ್ಯೂಸ್‌ಗೆ ಆದೇಶ ನೀಡಿದೆ. ನನಗೆ ಒದಗಿಸಲಾದ ಪೊಟ್ಟಣವನ್ನು ಪರೀಕ್ಷಿಸಿದ್ದು, ಅದರ ಮೇಲೆ ಸ್ಪಷ್ಟವಾಗಿ ವೆಜ್ ಎಂದೇ ಬರೆಯಲಾಗಿತ್ತು. ಆದರೆ ತಿನ್ನುವಾಗ ಏನೋ ವ್ಯತ್ಯಾಸವಾದಂತೆ ಕಂಡು ಮತ್ತೊಮ್ಮೆ ಪರೀಕ್ಷಿಸಿದಾಗ ಅದರಲ್ಲಿ ಮಾಂಸದ ತುಂಡುಗಳು ಪತ್ತೆಯಾದವು. ನಾವು ಸಂಪ್ರದಾಯವಾದಿ ಹಿಂದೂ ಬ್ರಾಹ್ಮಣರಾಗಿದ್ದು, ಇದು ಆಘಾತಕಾರಿ" ಎಂದು ಶುಕ್ಲಾ ಹೇಳಿದ್ದಾರೆ.
"ಆದರೆ ಈ ಕುರಿತು ಲಿಖಿತ ದೂರು ನೀಡಲು ಯತ್ನಿಸಿದಾಗ ವಿಮಾನದ ಸಿಬ್ಬಂದಿಗಳು ಸಹಕರಿಸಿಲ್ಲ. ಆಹಾರ ಒದಗಿಸಿದ ಕಂಪೆನಿಯ ವಿರುದ್ಧ ಕ್ರಮಕೈಗೊಳ್ಳಲು ನನಗೆ ದೊರೆತ ಆಹಾರ ಪದಾರ್ಥದಲ್ಲಿ ಮಾಂಸಾಹಾರವಾಗಿತ್ತು ಎಂಬುದಾಗಿ ಸಿಬ್ಬಂದಿಗಳು ಅಥವಾ ಕ್ಯಾಪ್ಟನ್ ದೃಢಪಡಿಸುವುದು ನನಗೆ ಬೇಕಿತ್ತು. ಆದರೆ ಅವರು ಸಹಕರಿಸಲಿಲ್ಲ. ಬಳಿಕ ವಿಮಾನ ಕೆಳಗಿಳಿದ ಬಳಿಕ ಕ್ಯಾಪ್ಟನ್ ಭೇಟಿಯಾಗಲು ಬಯಸಿದೆ. ಅಷ್ಟರಲ್ಲಿ ಎಲ್ಲ ಪ್ರಯಾಣಿಕರು ಕೆಳಗಿಳಿಯುವ ತನಕ ಕಾಯುವಂತೆ ಹೇಳಲಾಯಿತು. ಬಳಿಕ ಪ್ರಯಾಣಿಕರೆಲ್ಲ ತೆರಳಿದ ಬಳಿಕ ನಾನು ಮತ್ತು ನನ್ನ ತಂದೆ ಇಬ್ಬರೇ ಉಳಿದಿದ್ದೆವು. ಅಷ್ಟರಲ್ಲಿ ಕ್ಯಾಬಿನ್ ಪ್ರವೇಶಿಸಿದ ಭದ್ರತಾ ಸಿಬ್ಬಂದಿ ಅತ್ಯಂತ ಒರಟಾಗಿ ವಿಮಾನದಿಂದ ಹೊರನಡೆಯುವಂತೆ ಹೇಳಿದರು. ಇದಾದ ಬಳಿಕ ತಾನು ವಿಮಾನ ನಿಲ್ದಾಣದ ಮ್ಯಾನೇಜರ್ ಬಳಿ ದೂರು ನೀಡಿದೆ" ಎಂದು ಶುಕ್ಲಾ ಹೇಳಿದ್ದಾರೆ.
ಗೋಏರ್ ಮೂಲಗಳು ಹೇಳುವಂತೆ "ಶುಕ್ಲಾ ಅವರು ವಿಪರೀತ ಕೋಪೋದ್ರೇಕಗೊಂಡಿದ್ದರು. ಸಿಬ್ಬಂದಿಗಳಿಗೆ ಅವರನ್ನು ಸಮಾಧಾನಿಸಲು ಯಾವುದೇ ದಾರಿ ಇರಲಿಲ್ಲ."
ಮುನ್ನೆಚ್ಚರಿಕಾ ಕ್ರಮವಾಗಿ ಊಟದ ಸ್ಯಾಂಪಲ್ ನೋಡಿಯೇ ವಿತರಿಸುತ್ತೇವೆ. ಕೆಫೆ ಕಾಫಿಡೇಗೂ ಆಹಾರ ಸರಬರಾಜು ಮಾಡುವ ಮುನ್ನ ಪೊಟ್ಟಣವನ್ನು ಎರಡೆರಡು ಬಾರಿ ಪರೀಕ್ಷಿಸಲು ವಿನಂತಿಸಿದ್ದೇವೆ" ಎಂದು ಗೋಏರ್ ಅಧಿಕೃತ ವಕ್ತಾರರು ಹೇಳಿದ್ದಾರೆ.
"ಇದಲ್ಲದೆ, ಕ್ಯಾಫ್ಟನ್ ಅವರು ವಿಮಾನ ಚಲಾಯಿಸುತ್ತಿದ್ದರು. ವಿಮಾನ ಕೆಳಗಿಳಿದ ಬಳಿಕ ತಕ್ಷಣದ ಪ್ರಕ್ರಿಯೆಗಳನ್ನು ಅವರು ಪೂರೈಸಬೇಕಿತ್ತು. ಹಾಗಾಗಿ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಮ್ಯಾನೇಜರ್ ಬಳಿ ಕಳುಹಿಸಲಾಯಿತು. ಅವರಿಗೆ ಸಾಧ್ಯವಿರವ ಎಲ್ಲಾ ರೀತಿಯ ಸಹಾಯ ಮಾಡಿರುವುದನ್ನು ಅವರು ನಿರಾಕರಿಸುವಂತಿಲ್ಲ" ಎಂದೂ ವಕ್ತಾರರು ಹೇಳಿದ್ದಾರೆ.