ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿನ ಕೋಲಾಹಲ ಸತತ ಮೂರು ದಿನಕ್ಕೆ ಮುಂದುವರಿದಿದೆ. ಸದನ ಆರಂಭವಾಗುತ್ತಲೇ, 2006ರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅವರು ತಪ್ಪಿತಸ್ಥರಲ್ಲ ಎಂಬುದಾಗಿ ಸಿಬಿಐ ನೀಡಿರುವ ಪತ್ರವನ್ನು ಸ್ಪೀಕರ್ ಅವರು ಸದನದಲ್ಲಿ ಮಂಡಿಸಿದ್ದು, ಈ ಪತ್ರವನ್ನು ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಹರಿದು ಬಿಸಾಕಿ, ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು.
ಸದನ ಆರಂಭವಾಗುತ್ತಲೇ ಪಿಡಿಪಿ ನಾಯಕರು ಗದ್ದಲ ಆರಂಭಿಸಿದರು. ಸ್ಪೀಕರ್ ಅವರು ನೀಡಿದ ಸಿಬಿಐ ಪತ್ರವನ್ನು ಅವರು ಹರಿದು ಬಿಸಾಡಿದರು. ಸಿಬಿಐ ಒಮರ್ ಅಬ್ದುಲ್ಲಾರನ್ನು ರಕ್ಷಿಸುತ್ತಿದೆ ಎಂದು ವಿರೋಧಪಕ್ಷವಾದ ಪಿಡಿಪಿ ನಾಯಕರು ಘೋಷಣೆಗಳನ್ನು ಕೂಗಿದರು. ಶಾಂತರಾಗುವಂತೆ ಸ್ಪೀಕರ್ ಅವರು ಪದೇಪದೇ ಮಾಡಿದ ಮನವಿ ಗಾಳಿಯಲ್ಲಿ ತೇಲಿಹೋಯಿತಷ್ಟೆ ಅಲ್ಲದೆ ಯಾವುದೇ ಪ್ರಯೋಜನವಾಗಿಲ್ಲ.
ಈ ಮಧ್ಯೆ, 2006 ಲೈಂಗಿಕ ಹಗರಣದಲ್ಲಿ ಓಮರ್ ಅಬ್ದುಲ್ಲಾ ಭಾಗಿಯಾಗಿದ್ದಾರೆ ಎಂಬುದಾಗಿ ಪಿಡಿಪಿ ಶಾಸಕ ಮುಜಾಫರ್ ಬಿಯಾಗ್ ಅವರು ಸದನದಲ್ಲಿ ಮಂಗಳವಾರ ಮಾಡಿರುವ ಗಂಭೀರ ಆರೋಪದ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್‌ಗಳು ಸಿದ್ಧವಾಗಿವೆ.
ಮೂರು ವರ್ಷಗಳ ಹಿಂದಿನ ಕುಖ್ಯಾತ ಶ್ರೀನಗರ ಲೈಂಗಿಕ ಹಗರಣದಲ್ಲಿ ಒಮರ್ ಅಬ್ದುಲ್ಲಾ ಅವರೂ ಒಳಗೊಂಡಿದ್ದಾರೆ ಎಂದು ಆಪಾದಿಸಿದ್ದ ಬಿಯಾಗ್, ಒಮರ್ ಈ ರಾಜ್ಯದ ಮುಖ್ಯಮಂತ್ರಿಯಾಗಲು ನೈತಿಕ ಹಕ್ಕು ಹೊಂದಿಲ್ಲ, ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. ಮೂರು ವರ್ಷಗಳ ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಒಮರ್ ಪಾಲ್ಗೊಳ್ಳುವಿಕೆ ಕುರಿತು ಯಾವುದೇ ಪುರಾವೆ ಇಲ್ಲ ಎಂದು ಹೇಳಿತ್ತು.
ಈ ಹಗರಣದಲ್ಲಿ ಓಮರ್ ಅಬ್ದುಲ್ಲಾ, ಅವರ ತಂದೆ ಫಾರೂಕ್ ಅಬ್ದುಲ್ಲಾ ಸೇರಿದಂತೆ ಪ್ರಮುಖ ರಾಜಕಾರಣಿಗಳ ಹೆಸರು ಕೇಳಿಬಂದಿತ್ತು.
ಪಿಡಿಪಿ ನಾಯಕರ ಆರೋಪದಿಂದ ಬೇಸತ್ತ ಒಮರ್ ಅಬ್ದುಲ್ಲಾ ತಕ್ಷಣವೇ ರಾಜ್ಯಪಾಲರ ಬಳಿ ತೆರಳಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಆರೋಪ ಸಾಬೀತಾಗುವ ತನಕ ಯಾರೇ ಆದರೂ ನಿರಪರಾಧಿಯಾಗಿರುವ ಕಾರಣ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲರು ಸೂಚಿಸಿದ್ದರು. ಬುಧವಾರ ಮುಂಜಾನೆ ಸದನ ಆರಂಭವಾದ ವೇಳೆಗೆ ಒಮರ್ ಹಾಜರಿರಲಿಲ್ಲ.