ವಿವಾದಾಸ್ಪದ ಮನೆಮುರುಕ ಸಚ್ ಕಾ ಸಾಮ್ನಾ ಕಾರ್ಯಕ್ರಮಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿದ್ದ ಎರಡು ದೂರುಗಳನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಾಧೀಶ ಎ.ಪಿ. ಶಾ ನೇತೃತ್ವದ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸುವ ವೇಳೆಗೆ, ಈ ಕುರಿತು ಅರ್ಜಿದಾರರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಬಹುದು ಎಂದಿದೆ.
"ಈ ಕಾರ್ಯಕ್ರಮವನ್ನು ನಿಷೇಧಿಸಬೇಕೇ ಬೇಡವೇ ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಇದು ನ್ಯಾಯಾಲಯದ ಕೆಲಸವಲ್ಲ. ಇದಕ್ಕಿಂತಲೂ ಗಂಭೀರವಾದ ಸಮಸ್ಯೆಗಳನ್ನು ದೇಶ ಎದುರಿಸುತ್ತಿದ್ದು ಅದನ್ನು ಮೊದಲು ಪರಿಹರಿಸಬೇಕಿದೆ" ಎಂದು ವಿಭಾಗೀಯ ಪೀಠ ಹೇಳಿದೆ.
ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮವು ಭಾರತೀಯ ಸಮಾಜದ ಮೌಲ್ಯಗಳಿಗೆ ವಿರುದ್ಧವಾದುದಾಗಿದೆ ಎಂಬುದಾಗಿ ದೀಪಕ್ ಮಿಯಾನಿ ಮತ್ತು ಪ್ರಭಾತ್ ಕುಮಾರ್ ಎಂಬಿಬ್ಬರು ಅರ್ಜಿದಾರರು ದೂರಿದ್ದು, ಈ ಕಾರ್ಯಕ್ರಮದ ಪ್ರಸಾರದ ರದ್ದತಿಗೆ ಮನವಿ ಮಾಡಿದ್ದರು.
ನಮ್ಮ ಸಂಸ್ಕೃತಿಯು ದೂರದರ್ಶನ ಕಾರ್ಯಕ್ರಮದಿಂದ ಒಡೆಯುವಷ್ಟು ದುರ್ಬಲವಾದುದು ಅಲ್ಲ ಎಂಬುದಾಗಿ ನ್ಯಾಯಾಲಯವು ಮನವಿಯನ್ನು ತಿರಸ್ಕರಿಸುತ್ತಾ ಹೇಳಿದೆ.