ಸಮವಸ್ತ್ರಕ್ಕೆ ಅಳತೆ ತೆಗೆಯುವ ನೆಪದಲ್ಲಿ ಶಿಕ್ಷಕನೊಬ್ಬ ಬಾಲಕಿಯರ ಬಟ್ಟೆಬಿಚ್ಚಿಸಿದ ಆಘಾತಕಾರಿ ಘಟನೆ ಇಲ್ಲಿನ ತ್ಯೋಂಡಾ ಸಮೀಪದ ಸರ್ಕಾರಿ ಶಾಲೆಯೊಂದರಲ್ಲಿ ಸಂಭವಿಸಿರುವುದಾಗಿ ವರದಿಯಾಗಿದೆ.
ಈ ನಾಚಿಕೆಗೇಡಿನ ಘಟನೆಯಿಂದಾಗಿ ಆ ಎಂಟು ಬಾಲಕಿಯರು ಗಂಜ್‌ಬಾಸೋಡ ಎಂಬಲ್ಲಿನ ನೂರ್ಪುರ್ ಶಿಕ್ಷಣ ಖಾತರಿ ಯೋಜನಾ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಸ್ಥಗಿತಗೊಳಿಸುವಂತೆ ಮಾಡಿದೆ.
ಈ ಆತಂಕಕಾರಿ ಘಟನೆಯು ಜುಲೈ 24ರಂದು ಸಂಭಿವಿಸಿದ್ದು, ಈ ಕುರಿತು ಬಾಲಕಿಯರು ತಮ್ಮ ಹೆತ್ತವರಲ್ಲಿ ದೂರು ನೀಡಿದಾಗ ಬೆಳಕಿಗೆ ಬಂದಿದೆ ಎಂಬುದಾಗಿ ಜಿಲ್ಲಾ ಶಿಕ್ಷಣಾಧಿಕಾರಿ ಮನೀಶ್ ವರ್ಮಾ ವಿಧಿಶಾದಲ್ಲಿ ಬುಧವಾರ ತಿಳಿಸಿದ್ದಾರೆ.
ಸಂಜೀವ್ ಶರ್ಮಾ ಎಂಬ ಶಿಕ್ಷಕ ಸಮವಸ್ತ್ರಕ್ಕಾಗಿ ಮಕ್ಕಳ ಅಳೆತೆ ತೆಗೆಯುವ ನೆಪದಲ್ಲಿ ಐದನೆ ತರಗತಿಯ ಎಂಟು ಆದಿವಾಸಿ ಮಕ್ಕಳು ತಮ್ಮ ಬ್ಲಾಸುಗಳನ್ನು ಬಿಚ್ಚಿ ಮೇಲ್ಭಾಗವನ್ನು ಬೆತ್ತಲಾಗಿಸಿ ಇಂಚ್ ಟೇಪಿಗೆ ಬದಲಾಗಿ ತನ್ನ ಬೆರಳುಗಳಿಂದ ಅಳತೆ ತೆಗೆದಿದ್ದ ಎಂದು ಮಕ್ಕಳು ದೂರಿದ್ದಾರೆ.
ಬಾಗಿಲು ಮುಚ್ಚಿದ ಕೊಠಡಿಗೆ ಒಮ್ಮೆಗೆ ಎರಡು ಬಾಲಕಿಯರನ್ನು ಕರೆದು ಶಿಕ್ಷಕ ವಿದ್ಯಾರ್ಥಿನಿಯರೊಂದಿಗೆ ಈ ಅನುಚಿತ ವರ್ತನೆ ತೋರಿದ್ದಾನೆ. ಆತ ಅಳತೆ ತೆಗೆಯುವ ನೆಪದಲ್ಲಿ ಮೈಮೇಲೆ ಕೈಹಾಕಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಬಾಲಕಿಯರು ದೂರಿದ್ದಾರೆ.
ಶಿಕ್ಷಕನ ಈ ದುರ್ನಡೆತೆ ಬೆಳಕಿಗೆ ಬರುತ್ತಿರುವಂತೆ ರೊಚ್ಚಿಗೆದ್ದ ಗ್ರಾಮಸ್ಥರು ಶಾಲೆಗೆ ಧಾವಿಸಿದರು. ಅಷ್ಟರಲ್ಲಿ ಶಾಲೆಗೆ ಬೀಗ ಹಾಕಿ ಶರ್ಮಾ ಪರಾರಿಯಾಗಿದ್ದ. ಬಳಿಕ ಅವರು ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು.