ದಾವೂದ್ ಇಬ್ರಾಹಿಂ ಸೇರಿದಂತೆ 41 ದೇಶಭ್ರಷ್ಟರನ್ನು ಒಪ್ಪಿಸುವಂತೆ ಭಾರತವು ಕೇಳುತ್ತಲೇ ಬಂದಿದ್ದರೂ, ಇದಕ್ಕೆ ಸಹಕರಿಸಲು ಪಾಕಿಸ್ತಾನ ನಿರಾಕರಿಸಿದೆ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಹೇಳಿದ್ದಾರೆ. ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು.
1993ರ ಮುಂಬೈ ಸರಣಿ ಬಾಂಬ್‌ದಾಳಿ ಮತ್ತು 26/11ರ ಭಯೋತ್ಪಾದನಾ ದಾಳಿಗಳಲ್ಲಿ ಪಾಲ್ಗೊಂಡವರು ಸೇರಿದಂತೆ ಪಾಕಿಸ್ತಾನ ಮತ್ತು ಭಾರತದ 42 ದೇಶಭ್ರಷ್ಟರ ಪಟ್ಟಿಯನ್ನು ಇಸ್ಲಾಮಾಬಾದಿಗೆ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೃಷ್ಣ ಹೇಳಿದ್ದಾರೆ.
ನಾವು ಯಾವುದೇ ಪುರಾವೆ ಅಥವಾ ದಾಖಲೆಗಳನ್ನು ನೀಡಿದರೂ, ಇದು ಸಾಲದು, ನ್ಯಾಯಾಲಯದಲ್ಲಿ ಸಾಬೀತು ಪಡಿಸಲು ಈ ಪುರಾವೆ ಸಾಕಾಗುವುದಿಲ್ಲ ಎಂಬ ಒಂದೇ ರಾಗವನ್ನು ಪಾಕಿಸ್ತಾನ ಹಾಡುತ್ತಿದೆ ಎಂದು ನುಡಿದ ಅವರು, ದಾವೂದ್ ಇಬ್ರಾಹಿಂ, ಟೈಗರ್ ಮೆಮನ್, ಚೋಟಾ ಶಕೀಲ್ ಮತ್ತು ಲಕ್ಬೀರ್ ಸಿಂಗ್ ಮುಂತಾದ ಭಾರತೀಯ ಅಪರಾಧಿಗಳು ತನ್ನ ರಾಷ್ಟ್ರದಲ್ಲಿ ಇಲ್ಲ ಎಂದೇ ಪಾಕಿಸ್ತಾನ ಹೇಳುತ್ತಿದೆ.
"ಪಾಕಿಸ್ತಾನಿ ಪ್ರಜೆಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಧಾರದ ಕೊರತೆ ಹಾಗೂ ಒಪ್ಪಂದದ ಕೊರತೆಯನ್ನು ಮುಂದಿಡುತ್ತಿದೆ. ಭಾರತವು ಈ ಕುರಿತು ಒಪ್ಪಂದಕ್ಕೆ 11 ವ್ಯರ್ಥ ಪ್ರಯತ್ನ ಮಾಡಿದೆ. ಆದರೆ ಪಾಕಿಸ್ತಾನವು ಇದಕ್ಕೆ ಧನಾತ್ಮಕವಾಗಿ ಸ್ಪಂದಿಸಿಲ್ಲ" ಎಂದು ಅವರು ಸದನದಲ್ಲಿ ಹೇಳಿದರು.
ಇದು ಉಭಯ ರಾಷ್ಚ್ರಗಳ ಹಿತಾಸಕ್ತಿಗಾಗಿ ಎಂಬುದಾಗಿ ನಾವು ಪಾಕಿಸ್ತಾನಕ್ಕೆ ಹೇಳುತ್ತಲೇ ಬಂದಿದ್ದೇವೆ. ಭಾರತದೊಂದಿಗೆ ಸಹಕಾರದ ಸಂಬಂಧವನ್ನು ಹೊಂದುವಂತೆ ಪಾಕಿಸ್ತಾನದ ಮನಒಲಿಸಲು ಸರ್ಕಾರವು ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.