ತನ್ನ ಮೇಲಿನ ಲೈಂಗಿಕ ಆರೋಪ ಹಗರಣ ಆರೋಪಕ್ಕೆ ತಿರುಗೇಟು ನೀಡಿರುವ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, 2006ರಲ್ಲಿ ಅವರದೇ ಪಕ್ಷದ ಜನರು ಭಾಗಿಯಾಗಿದ್ದ ಈ ಹಗರಣ ನಡೆದಾಗ ಪಿಡಿಪಿ ನಾಯಕ ಮುಫ್ತಿ ಮೊಹಮ್ಮದ್ ಸಯೀದ್ ಕಣ್ಣು ಮುಚ್ಚಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
"ಈ ಹಗರಣ ನಡೆಯಲು ಸಯೀದ್ ಆದ್ಯತೆ ನೀಡಿದ್ದರು ಮತ್ತು ಕಾಶ್ಮೀರದ ಹೆಮ್ಮಕ್ಕಳು ತನ್ನದೇ ಜನರಿಂದ ಶೋಷಣೆಗೀಡಾಗುತ್ತಿರುವ ವೇಳೆಗೆ ಅವರು ಕ್ಯಾರೇ ಅಂದಿರಲಿಲ್ಲ. ಅವರು ಈ ಮಣ್ಣಿನ ನಿಜವಾದ ಮಗನಾಗಿದ್ದರೆ, ಅಂದೇ ರಾಜೀನಾಮೆ ನೀಡುತ್ತಿದ್ದರು ಆದರೆ ಅವರು ತಮ್ಮ ಕಣ್ಣನ್ನು ಮುಚ್ಚಿದ್ದರು" ಎಂದು ಹೇಳಿದರು. ಅವರು ತನ್ನ ಗುಪ್ಕಾರ್ ರಸ್ತೆಯ ನಿವಾಸದಲ್ಲಿ ತನ್ನ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಪಿಡಿಪಿ ಪಕ್ಷದ ಉಪನಾಯಕ ಮುಜಾಫರ್ ಹುಸೇನ್ ಬೇಗ್ ಅವರು ಮಂಗಳವಾರ ಸದನದಲ್ಲಿ ಒಮರ್ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿದ್ದು, ಈ ವೇಳೆ ಸದನದಲ್ಲಿ ನಾಟಕೀಯ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಿದ್ದರೂ ಇದರಿಂದ ನಾವು ತೃಪ್ತರಾಗಿಲ್ಲ ಎಂದು ಹೇಳಿದ ಪಿಡಿಪಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ. ಬುಧವಾರದಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸದನದಲ್ಲಿ ಸಿಬಿಐ ಪತ್ರದ ಪ್ರತಿಯನ್ನು ಹರಿದು ಬಿಸಾಕಿದರು.
ಈ ಆಪಾದನೆಯ ಬಳಿಕ ರಾಜೀನಾಮೆ ನೀಡಿದ್ದ ಓಮರ್, "ಸಯೀದ್ ಅವರು ತನ್ನದೇ ಪಕ್ಷದ ಜನರು ಪಾಲ್ಗೊಂಡಿರುವ ಈ ಹಗರಣದಿಂದಾಗಿ ತನ್ನ ಸರ್ಕಾರ ಬಿದ್ದು ಹೋಗುತ್ತದೆ ಎಂದು ಭಯಪಟ್ಟಿದ್ದರು" ಎಂದು ದೂರಿದರು. ಈ ಹಗರಣವು 2006ರಲ್ಲಿ ಮಹಿಳೆಯೊಬ್ಬಳ ಬಂಧನದಿಂದಾಗಿ ಬೆಳಕಿಗೆ ಬಂದಿತ್ತು.
"ಈ ಹಗರಣವು ಸಯೀದ್ ಮುಖ್ಯಮಂತ್ರಿಯಾಗಿದ್ದಾಗ ಬೆಳಕಿಗೆ ಬಂದಿತ್ತು. ಅವರ ನಿಕಟ ವ್ಯಕ್ತಿಗಳು ಇದರಲ್ಲಿ ಒಳಗೊಂಡಿದ್ದು, ಇದರಿಂದಾಗಿ ತನ್ನ ಸರ್ಕಾರ ಪತನಗೊಳ್ಳುತ್ತದೆ ಎಂದು ಅವರು ಭೀತಿಗೊಳಗಾಗಿದ್ದರು" ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.
ಈ ಪ್ರಕರಣವನ್ನು ಸಿಬಿಐಗೊಪ್ಪಿಸಿದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್ ಅವರ ಕ್ರಮವನ್ನು ಒಮರ್ ಶ್ಲಾಘಿಸಿದರು.
ಸಯೀದ್ ಹಾಗೂ ಅವರ ಪುತ್ರಿ ಮೆಹಬೂಬ ಅವರುಗಳು ಮುಂದಿನ ಚುನಾವಣೆಯಲ್ಲಿ ಜನತೆಯನ್ನು ಎದುರಿಸಲು ತಾಳ್ಮೆಯಿಂದ ಆರು ವರ್ಷಗಳ ಕಾಲ ಕಾಯಬೇಕು ಎಂದು ನುಡಿದರು.
"ಕಳೆದ ಆರು ವರ್ಷಗಳಲ್ಲಿ ನಾವು ಜವಾಬ್ದಾರಿಯುತವಾಗಿ ವಿರೋಧ ಪಕ್ಷದ ಪಾತ್ರವನ್ನು ವಹಿಸಿದ್ದೆವು. ಆದರೆ ನಾವೆಂದಿಗೂ ಸ್ಪೀಕರ್ ಮೇಜಿನ ಮೈಕ್ ಕಸಿಯಲಿಲ್ಲ. ಬದಲಿಗೆ ಸರ್ಕಾರವು ಸದನದಲ್ಲಿ ತನ್ನ ಕಲಾಪಗಳನ್ನು ನಡೆಸಲು ಅನುವು ನೀಡಿದ್ದೆವು. ಆದರೆ ಈಗ ಪಿಡಿಪಿ ಎಲ್ಲಾ ಮಿತಿಗಳನ್ನು ದಾಟಿದ್ದು, ಇದು ರಾಜಕೀಯ ಸಿದ್ಧಾಂತಗಳಿಗೆ ಸಮವಲ್ಲ" ಎಂದವರು ದೂರಿದ್ದಾರೆ.