ಕಿರಿಯ ವಿದ್ಯಾರ್ಥಿಗಳನ್ನು ರ‌್ಯಾಗಿಂಗ್ ಮಾಡುತ್ತಿರುವಾಗ ಸಿಕ್ಕಿಬಿದ್ದ ಬನಾರಸ್ ವಿಶ್ವವಿದ್ಯಾನಿಲಯದ ಹತ್ತು ಮಂದಿ ಹಿರಿಯ ವಿದ್ಯಾರ್ಥಿಗಳನ್ನು ಅಮಾನತ್ತುಗೊಳಿಸಿರುವುದಾಗಿ ವಿವಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಬಿ.ಟೆಕ್(ಅಪ್ಲೈಡ್ ಮ್ಯಾಥಮೆಟಿಕ್ಸ್) ದ್ವಿತೀಯ ವರ್ಷದ ಎಂಟು ಹಾಗೂ ತೃತೀಯ ವರ್ಷದ ಇಬ್ಬರು ವಿದ್ಯಾರ್ಥಿಗಳು ಅಸ್ಸಿ ಘಾಟ್‌ನಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಗೋಳುಹುಯ್ದುಕೊಳ್ಳುತ್ತಿರುವ ವೇಳೆ ವಿಶ್ವವಿದ್ಯಾನಿಲಯದ ಭದ್ರತಾ ಸಿಬ್ಬಂದಿಗಳ ಕೈಗೆ ಸಿಕ್ಕಿಬಿದ್ದಿದ್ದರು ಎಂದು ವಕ್ತಾರ ರಾಜೇಶ್ ಸಿಂಗ್ ಅವರು ಹೇಳಿದ್ದಾರೆ.
ತಪ್ಪಿತಸ್ಥ ವಿದ್ಯಾರ್ಥಿಗಳಿಗೆ ವಿವಿಯು ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದಲ್ಲದೆ ಅವರನ್ನು ಆರು ತಿಂಗಳ ಕಾಲ ಹಾಸ್ಟೇಲಿನಿಂದ ಹೊರಹಾಕಲಾಗಿದ್ದು, 15 ದಿನಗಳ ಕಾಲ ತರಗತಿಯಿಂದ ಅಮಾನತ್ತುಗೊಳಿಸಲಾಗಿದೆ.
ಈ ವಿದ್ಯಾರ್ಥಿಗಳ ವಿರುದ್ಧ ಲಂಕಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭೂಷಣ್ ತಿಳಿಸಿದ್ದಾರೆ.
ಅಲಹಾಬಾದ್ ಐಐಐಟಿ ವಿದ್ಯಾರ್ಥಿನಿಯರಿಗೂ ದಂಡ ಇದೇವೇಳೆ, ಹೊಸದಾಗಿ ಸೇರ್ಪಡೆಗೊಂಡ ಹುಡುಗಿಯರನ್ನು ರ‌್ಯಾಗಿಂಗ್ ಮಾಡುತ್ತಿದ್ದ ಅಲಹಾಬಾದ್ ಐಐಐಟಿಯ 19 ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿನಿಯರ ದಂಡ ಹೇರಲಾಗಿದೆ. 50 ಸಾವಿರ ರೂಪಾಯಿ ದಂಡವಲ್ಲದೆ, ಇವರ ವಿದ್ಯಾರ್ಥಿವೇತನವನ್ನೂ ಹಿಂತೆಗೆಯಲಾಗಿದ್ದು ಇವರನ್ನೂ ಸಹ ಕಾಲೇಜಿನ ವಸತಿಗೃಹದಿಂದ ಹೊರಹಾಕಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಎಂ.ಡಿ. ತಿವಾರಿ ಹೇಳಿದ್ದಾರೆ. ಆದರೆ ಈ ಹುಡುಗಿಯರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.