ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅವರ ವಿರುದ್ಧ ಪಿಡಿಪಿ ಶಾಸಕರು ಮಾಡಿದ್ದ ಲೈಂಗಿಕ ಹಗರಣ ಆರೋಪವನ್ನು ರಾಜ್ಯಪಾಲ ಎನ್.ಎನ್.ವೋಹ್ರಾ ಗುರುವಾರ ಸಾರಸಗಟಾಗಿ ತಳ್ಳಿಹಾಕಿದ್ದಲ್ಲದೆ ಒಮರ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿದು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಸೂಚಿಸಿದ್ದಾರೆ.
ಜಮ್ಮು-ಕಾಶ್ಮೀರ ವಿಧಾನಸಭಾ ಕಲಾಪದಲ್ಲಿ ಪಿಡಿಪಿ ಸದಸ್ಯರು ಒಮರ್ ವಿರುದ್ಧ ಲೈಂಗಿಕ ಹಗರಣದ ಆರೋಪ ಹೊರಿಸಿದ್ದರು. ಇದರಿಂದ ಅಸಮಾಧಾನಗೊಂಡ ಅವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಗುರುವಾರ ವೋಹ್ರಾ ಅವರು ರಾಜೀನಾಮೆಯನ್ನು ತಿರಸ್ಕರಿಸಿ, ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವಂತೆ ಕೋರಿಕೊಳ್ಳುವ ಮೂಲಕ ಜಯ ದೊರೆತಂತಾಗಿದೆ.
ಪಿಡಿಪಿ ಪಕ್ಷದ ಉಪನಾಯಕ ಮುಜಾಫರ್ ಹುಸೇನ್ ಬೇಗ್ ಅವರು ಮಂಗಳವಾರ ಸದನದಲ್ಲಿ ಒಮರ್ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿದ್ದು, ಈ ವೇಳೆ ಸದನದಲ್ಲಿ ನಾಟಕೀಯ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಿದ್ದರೂ ಇದರಿಂದ ನಾವು ತೃಪ್ತರಾಗಿಲ್ಲ ಎಂದು ಹೇಳಿದ ಪಿಡಿಪಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿತ್ತು. ಅಲ್ಲದೇಬುಧವಾರದಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸದನದಲ್ಲಿ ಸಿಬಿಐ ಪತ್ರದ ಪ್ರತಿಯನ್ನು ಹರಿದು ಬಿಸಾಕಿದ್ದರು.
ಈ ಆಪಾದನೆಯ ಬಳಿಕ ರಾಜೀನಾಮೆ ನೀಡಿದ್ದ ಒಮರ್, "ಸಯೀದ್ ಅವರು ತನ್ನದೇ ಪಕ್ಷದ ಜನರು ಪಾಲ್ಗೊಂಡಿರುವ ಈ ಹಗರಣದಿಂದಾಗಿ ತನ್ನ ಸರ್ಕಾರ ಬಿದ್ದು ಹೋಗುತ್ತದೆ ಎಂದು ಭಯಪಟ್ಟಿದ್ದರು" ಎಂದು ದೂರಿದ್ದರು. ಈ ಹಗರಣವು 2006ರಲ್ಲಿ ಮಹಿಳೆಯೊಬ್ಬಳ ಬಂಧನದಿಂದಾಗಿ ಬೆಳಕಿಗೆ ಬಂದಿತ್ತು.
ಆ ನಿಟ್ಟಿನಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಒಮರ್ ವಿರುದ್ಧ ಪಿಡಿಪಿ ವರಿಷ್ಠೆ ಮುಫ್ತಿ ಸೇರಿದಂತೆ ಶಾಸಕರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿದ್ದಾರೆ. ಹಾಗೂ ಪ್ರಕರಣದ ಕುರಿತಂತೆ ಒಮರ್ ಅಬ್ದುಲ್ಲ ಅವರು ರಾಜೀನಾಮೆ ಕೊಡುವುದರಲ್ಲಿ ಯಾವುದೇ ಆಧಾರವಿಲ್ಲ ಎಂದು ಕೇಂದ್ರ ಗೃಹಸಚಿವಾಲಯ ನೀಡಿರುವ ಮಾಹಿತಿಯಲ್ಲಿ ತಿಳಿಸಿರುವುದಾಗಿ ರಾಜ್ಯಪಾಲರ ವಕ್ತಾರ ಈ ಸಂದರ್ಭದಲ್ಲಿ ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ವೋಹ್ರಾ ಅವರ ನಿರ್ಧಾರದ ಘೋಷಣೆಯ ಬಳಿಕ ಪ್ರತಿಕ್ರಿಯಿಸಿರುವ ಒಮರ್, ರಾಜ್ಯಪಾಲರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಸರ್ಕಾರ ಪ್ರಕರಣವನ್ನು ತನಿಖೆ ಒಪ್ಪಿಸಿರುವ ತನ್ಮಧ್ಯೆಯೇ ನಿರ್ದೋಷಿ ಎಂಬ ನಿಲುವನ್ನು ಸಮರ್ಥಿಸಿಕೊಂಡಂತಾಗಿದೆ ಎಂದು ತಿಳಿಸಿದರು.