ಸಿಟ್ ತನಿಖೆ ನಿಲ್ಲಿಸಿ- ಗುಜರಾತ್; ಸುಪ್ರೀಂ ಕೋರ್ಟ್ ನಕಾರ
ನವದೆಹಲಿ, ಶುಕ್ರವಾರ, 31 ಜುಲೈ 2009( 09:17 IST )
ಗೋದ್ರಾ ನಂತರದ ಗಲಭೆ ಪ್ರಕರಣ ಸಂಬಂಧ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ವಿಶೇಷ ತನಿಖಾ ತಂಡ(ಸಿಟ್)ವು ತನಿಖೆ ನಡೆಸಲು ಉಚ್ಛ ನ್ಯಾಯಾಲಯವು ಹಸಿರು ನಿಶಾನೆ ತೋರಿಸಿದ ಬೆನ್ನಿಗೆ ಸಿಟ್ ತನಿಖೆಯ ಮೂರು ತಿಂಗಳ ಗಡುವನ್ನು ವಿಸ್ತರಿಸಬಾರದು ಎಂದು ರಾಜ್ಯ ಸರಕಾರ ಸಲ್ಲಿಸಿದ್ದ ಮನವಿಯನ್ನು ಗುರುವಾರ ಸರ್ವೋಚ್ಛ ನ್ಯಾಯಾಲಯ ತಳ್ಳಿ ಹಾಕಿದೆ.
2002ರ ಕೋಮುಗಲಭೆಯಲ್ಲಿ ಮೋದಿ ಮತ್ತು ಪ್ರಮುಖ ರಾಜಕಾರಣಿಗಳ ಪಾತ್ರವಿದೆ ಎಂದು ಆರೋಪಿಸಿ ಝಾಕಿಯಾ ಜಾಪ್ರಿ ಸಲ್ಲಿಸಿದ್ದ ದೂರಿನನ್ವಯ ಸುಪ್ರೀಂ ಕೋರ್ಟ್ ಏಪ್ರಿಲ್ 27ರಂದು ಸಿಬಿಐ ಮುಖ್ಯಸ್ಥ ಆರ್.ಕೆ. ರಾಘವನ್ ನೇತೃತ್ವದ ಸಿಟ್ ತಂಡ ತನಿಖೆ ನಡೆಸುವಂತೆ ಸೂಚಿಸಿತ್ತು. ಇದಾದ ಎರಡು ತಿಂಗಳ ನಂತರ ಸಿಟ್ ಪಾತ್ರವನ್ನು ಮತ್ತು ಮುಖ್ಯಮಂತ್ರಿಯವರನ್ನು ತನಿಖೆಗೊಳಪಡಿಸುವ ಅದರ ಅಧಿಕಾರವನ್ನು ಪ್ರಶ್ನಿಸಿ ಬಿಜೆಪಿ ಶಾಸಕರೊಬ್ಬರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಏಪ್ರಿಲ್ 27ರಂದು ಸುಪ್ರೀಂ ಕೋರ್ಟ್ ನೀಡಿದ್ದ ಕಾಲಾವಧಿಯು ಜುಲೈ 27ಕ್ಕೆ ಮುಕ್ತಾಯಗೊಂಡಿದ್ದು, ನ್ಯಾಯಾಲಯವು ಮತ್ತೆ ವಿಸ್ತರಿಸಬಾರದು ಎಂದು ಗುಜರಾತ್ ಸರಕಾರಿ ವಕೀಲ ಮುಕುಲ್ ರೋಹಟ್ಗಿಯವರು ಮಾಡಿದ ಮನವಿಯನ್ನು ಇದೀಗ ತಿರಸ್ಕರಿಸಲಾಗಿದೆ. ಸಿಟ್ ತನ್ನ ಕಾರ್ಯವ್ಯಾಪ್ತಿಯನ್ನು ಮೀರಿದೆ ಎಂದು ಸರಕಾರಿ ವಕೀಲರು ನ್ಯಾಯಾಲಯದ ಗಮನ ಸೆಳೆದಿದ್ದರು.
ಸಿಟ್ ತನಿಖೆಯ ಗಡುವನ್ನು ವಿಸ್ತರಿಸುವುದರಿಂದ ರಾಜ್ಯ ಸರಕಾರಕ್ಕೇನು ತೊಂದರೆ? ಸಿಟ್ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕಾರ್ಯನಿರ್ವಹಿಸುತ್ತದೆ ಎಂದು ಕೋರ್ಟ್ ಡಿಸೆಂಬರ್ 31ರವರೆಗೆ ತನಿಖೆ ನಡೆಸಲು ಸಿಟ್‌ಗೆ ಅನುಮತಿ ನೀಡಿತು.