ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಬೂಟಾ ಸಿಂಗ್ ಅವರ ಪುತ್ರ ಸರೋಬ್ಜಿತ್ ಸಿಂಗ್ ಅವರನ್ನು ಭ್ರಷ್ಟಾಚಾರ ಆರೋಪದ ಮೇರೆಗೆ ಸಿಬಿಐನ ಭ್ರಷ್ಟಾಚಾರ ವಿರೋಧಿ ಬ್ಯೂರೋ ಬಂಧಿಸಿದೆ.
ಪರಿಶಿಷ್ಟಜಾತಿ ಮತ್ತು ಪಂಗಡದ ಆಯೋಗದಲ್ಲಿದ್ದ ಪ್ರಕರಣ ಒಂದನ್ನು ಮುಚ್ಚಿ ಹಾಕಲು ಗುತ್ತಿಗೆದಾರನೊಬ್ಬನಿಂದ ಒಂದು ಕೋಟಿ ರೂಪಾಯಿ ಲಂಚಕ್ಕೆ ಒತ್ತಾಯಿಸಿರುವ ಆರೋಪವನ್ನು ಸರೋಬ್ಜಿತ್ ಸಿಂಗ್ ಎದುರಿಸುತ್ತಿದ್ದಾರೆ.
ನಾಸಿಕ್ ಮೂಲದ ಗುತ್ತಿಗೆದಾರನಾಗಿರುವ ರಾಮರಾವ್ ಪಾಟೀಲ್ ಎಂಬಾತನಿಂದ ಸರೋಬ್ಜಿತ್ ಸಿಂಗ್ ಅಲಿಯಾಸ್ ಸ್ವೀಟಿ ಲಂಚ ಕೇಳಿರುವುದಾಗಿ ಹೇಳಲಾಗಿದ್ದು, ಈತನೊಂದಿಗೆ ಇತರ ಮೂರು ಮಂದಿಯನ್ನು ಬಂಧಿಸಲಾಗಿದೆ. ಆತನನ್ನು ಪ್ರಶ್ನಿಸಲಾಗಿದ್ದು ಬಳಿಕ ಬಂಧನಕ್ಕೀಡುಮಾಡಲಾಗಿದೆ ಎಂದು ಸಿಬಿಐನ ಜಂಟಿ ನಿರ್ದೇಶಕ ರಿಶಿರಾಜ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಹವಾಲ ದೃಷ್ಟಿಯಿಂದಲೂ ತನಿಖೆ ನಡೆಸುತ್ತಿರುವುದಾಗಿಯೂ ಅವರು ಹೇಳಿದ್ದಾರೆ. ಸ್ವೀಟಿಯನ್ನು ಕಳೆದ ರಾತ್ರಿ ಸಿಟಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲಾಗಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆತ, "ತಾನು ನಿರಪರಾಧಿ, ತನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ. ಎಲ್ಲಾ ಆರೋಪಗಳು ಸುಳ್ಳು" ಎಂದು ಹೇಳಿದ್ದಾರೆ. ಸರೋಬ್ಜಿತ್ ಸಿಂಗ್‌ನನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.
ಪಾಟೀಲ್ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಯ್ದೆಯಡಿ ಪ್ರಕರಣ ಒಂದನ್ನು ಎದುರಿಸುತ್ತಿದ್ದು, ಈ ಪ್ರಕರಣವನ್ನು ಬೂಟಾ ಸಿಂಗ್ ಅಧ್ಯಕ್ಷರಾಗಿರುವ ಆಯೋಗವು ತನಿಖೆ ನಡೆಸುತ್ತಿದೆ. ದಲಿತ ಸಮುದಾಯದ ಸುಮಾರು 100ಕ್ಕೂ ಅಧಿಕ ಮಂದಿಯ ಪರವಾಗಿ ಪಾಟೀಲ್ 10 ಕೋಟಿ ರೂಪಾಯಿ ಸಾಲವನ್ನು ಸಹಕಾರಿ ಸಂಘ ಒಂದರಿಂದ ಪಡೆದಿದ್ದು ಇದನ್ನು ಗುಳುಂ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ತನ್ನ ತಂದೆಯ ಸಹಾಯದಿಂದ ಈ ಪ್ರಕರಣವನ್ನು ಮುಚ್ಚಿಹಾಕಲು ಸ್ವೀಟಿ ಪಾಟೀಲನಿಂದ ಒಂದು ಕೋಟಿ ರೂಪಾಯಿ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಲಾಗಿದೆ.
ಈ ಕುರಿತು ಪಾಟೀಲ್ ಸಿಬಿಐಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಸ್ಟೀಟಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ಮುಂಬೈಗೆ ಕರೆತರಲಾಗಿದೆ.