ಹಿರಿಯ ಐಎಎಸ್ ಅಧಿಕಾರಿ ಜಗದಾನಂದ ಪಾಂಡ ಮತ್ತು ಅವರ ನಾಲ್ವರು ಕುಟುಂಬಿಕರು ಗುಂಡೇಟಿನಿಂದ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ. ಬಾರ್ಗಡ್ ಜಿಲ್ಲೆಯಲ್ಲಿ ನಡೆದಿರುವ ಈ ಸಾವು ಅತ್ಯಂತ ನಿಗೂಢವಾಗಿದೆ.
ದಿಯೋಗಾಂವ್ ಗ್ರಾಮದಲ್ಲಿ ಈ ಘಟನೆ ಮಧ್ಯರಾತ್ರಿ ಸುಮಾರು ಎರಡು ಗಂಟೆಗೆ ಸಂಭವಿಸಿದೆ. ಎಲ್ಲಾ ಮೃತದೇಹಗಳ ತಲೆಯಲ್ಲಿ ಗುಂಡೇಟಿನ ಗಾಯವಿದೆ. ಪಾಂಡ ಅವರೊಂದಿಗೆ ಅವರ ಪತ್ನಿ, ತಂದೆ ಹಾಗೂ ಇಬ್ಬರು ಸಹೋದರಿಯರ ಶವ ಪತ್ತೆಯಾಗಿದೆ. ಪಾಂಡಾ ಅವರ ಮೃತದೇಹದ ಬಳಿ ಸರ್ವೀಸ್ ರಿವಾಲ್ವರ್ ಬಿದ್ದಿತ್ತು ಎಂದು ವರದಿ ತಿಳಿಸಿದೆ.
ಬರ್ಲಾದಲ್ಲಿನ ವಿಎಸ್ಎಸ್ ವೈದ್ಯಕೀಯ ಕಾಲೇಜಿಗೆ ಮೃತದೇಹಗಳನ್ನು ಕೊಂಡೊಯ್ಯಲಾಗಿದೆ. ಪಾಂಡ ಅವರ 22ರ ಹರೆಯದ ಪುತ್ರನ ಸ್ಥಿತಿ ಗಂಭೀರವಾಗಿದೆ.
ಒರಿಸ್ಸಾದಲ್ಲಿ ಸ್ಪೆಶಲ್ ರಿಲೀಫ್ ಕಮಿಶನರ್ ಆಗಿದ್ದ ಪಾಂಡಾ ಅವರನ್ನು ಸಾಗರೋತ್ತರ ವ್ಯವಹಾರಗಳ ಸಚಿವಾಲಯಕ್ಕೆ ಡೆಪ್ಯುಟೇಶನ್ ಮೇಲೆ ನಿಯುಕ್ತಿಗೊಳಿಸಲಾಗಿತ್ತು. ಅವರು ಎರಡು ದಿನಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದರು.
ಕೆಲವು ದಿನಗಳ ಹಿಂದೆ ಪಾಂಡ ಅವರ ದೆಹಲಿ ಕಚೇರಿ ಮೇಲೆ ಸಿಬಿಐ ದಾಳಿ ನಡೆದಿತ್ತು ಎನ್ನಲಾಗಿದೆ.