ಸುಮಧುರ ಸಂಗೀತಗಾರ್ತಿ ಲತಾಮಂಗೇಶ್ಕರ್ ಅವರ ಭಾವಚಿತ್ರ ಹಾಗೂ ವಿವರಗಳು ಇಲ್ಲದಿದ್ದರೂ, ಇದು ಅವರಿಗೆ ಮತದಾರರ ಗುರುತು ಚೀಟಿ ನೀಡಲು ಚುನಾವಣಾ ಆಯೋಗಕ್ಕೆ ಅಡ್ಡಿಯಾಗಲಿಲ್ಲ.
"ಗುರುತು ಚೀಟಿಗಾಗಿ ನಾವು ಈ ಹಿಂದೆ ಲತಾಜಿ ಅವರನ್ನು ಸಂಪರ್ಕಿಸಿದ್ದೆವು. ಆದರೆ ಅವರು ಭಾವಚಿತ್ರವಾಗಲಿ ಅಥವಾ ವಿವರಗಳನ್ನಾಗಲಿ ನೀಡಿರಲಿಲ್ಲ. ಹಾಗಾಗಿ ಫೋಟೋ ಐಡಿ ಕಾರ್ಡ್ ಸಿದ್ಧವಾಗಿರಲಿಲ್ಲ" ಎಂದು ಜಿಲ್ಲಾ ಉಪ ಚುನಾವಣಾಧಿಕಾರಿ ಸಂಜಯ್ ಭಾಗ್ವತ್ ಪಿಟಿಐಗೆ ತಿಳಿಸಿದ್ದಾರೆ. ಆದರೆ ಅವರ ಗುರುತಿನ ಚೀಟಿ ಇದೀಗ ಸಿದ್ಧವಾಗಿದೆ ಎಂದು ಹೇಳಿರುವ ಅವರು ಅಧಿಕಾರಿಗಳು ಲತಾರ ಭಾವಚಿತ್ರವನ್ನು ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿ ದಾಖಲೆಯನ್ನು ಸಿದ್ಧಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
"ನಾವು ಗುರುತು ಚೀಟಿಯನ್ನು ನಿನ್ನೆ ಅವರ ನಿವಾಸಕ್ಕೆ ತಲುಪಿಸಿದ್ದೇವೆ. ಭಾವಚಿತ್ರ ಸಲ್ಲಿಸುವಂತೆ ನಾವು ವಿನಂತಿಸಿದ್ದರೂ ಅವರು ಪ್ರತಿಸ್ಪಂದನೆ ನೀಡದಕಾರಣ ನಾವು ಅಂತರ್ಜಾಲದಿಂದ ಚಿತ್ರವನ್ನು ಬಳಸಿಕೊಂಡು ಕಾರ್ಡ್ ತಯಾರಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಈ ಗುರುತಿನ ಚೀಟಿಯನ್ನು ಪೆಡ್ಡರ್ ರಸ್ತೆಯಲ್ಲಿರುವ ಲತಾ ಅವರ ನಿವಾಸಕೆ ಒಯ್ದಿರುವ ವ್ಯಕ್ತಿಗೆ ಅವರ ಸಹೋದರ, ಖ್ಯಾತ ಸಂಗೀತ ಸಂಯೋಜಕರಾಗಿರುವ ಪಂಡಿತ್ ಹೃದಯನಾಥ್ ಮಂಗೇಶ್ಕರ್ ಹಾಗೂ ಪುತ್ರ ಆದಿನಾಥ್ ಅವರ ಪೋಟೋ ಮತ್ತು ವಿವರಗಳನ್ನು ನೀಡಲಾಗಿದೆ. ಆನ್‌ಲೈನ್ ಮೂಲಕ ಕಾರ್ಡ್ ಪಡೆಯುವುದು ಎಷ್ಟು ಸುಲಭ ಎಂಬುದನ್ನು ಪ್ರಸ್ತುತ ಪಡಿಸಲು ನಾವು ಇಚ್ಛಿಸುತ್ತೇವೆ ಎಂದು ಭಾಗ್ವತ್ ಹೇಳಿದ್ದಾರೆ.