ಪಾಕಿಸ್ತಾನಿ ಉಗ್ರ ಅಜ್ಮಲ್ ಅಮೀರ್ ಕಸಬ್‌ನ ತಪ್ಪೊಪ್ಪಿಗೆ ಹೇಳಿಕೆ ವೀಡಿಯೋವನ್ನು ಇಲ್ಲಿನ ಟಿವಿ ವಾಹಿನಿಯೊಂದಕ್ಕೆ ಸೋರಿಕೆ ಮಾಡಿರುವ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಮುಂಬೈ ದಾಳಿಯ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯ ಗುರುವಾರ ಪೊಲೀಸರನ್ನು ಒತ್ತಾಯಿಸಿದೆ.
ಕಸಬ್‌ನ ಬಂಧನದ ತಕ್ಷಣ ಆಸ್ಪತ್ರೆಯೊಂದರಲ್ಲಿ ರೆಕಾರ್ಡ್ ಮಾಡಲಾಗಿರುವ ತಪ್ಪೊಪ್ಪಿಗೆಯ ಸುಮಾರು 67 ನಿಮಿಷದ ಸಿಡಿಯನ್ನು ಕಳೆದ ವಾರ ಟಿವಿ ವಾಹಿನಿಯೊಂದು ಪದೇಪದೇ ಬಿತ್ತರಿಸಿತ್ತು.
ಈ ಸೋರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶ ಎಂ.ಎಲ್. ತಹಿಲ್ಯಾನಿ ಅವರು ಸಂಬಂಧಿತ ಅಧಿಕಾರಿಯು ಸಿಡಿ ಕಳವು ಮಾಡಿದ್ದು, ಕಸಬ್ ಮಾಡಿರುವ ಸೂಕ್ಷ್ಮ ತಪ್ಪೊಪ್ಪಿಗೆಯ ದಾಖಲೆಯನ್ನು ನೀಡಿರುವುದು 'ವಿಶ್ವಾಸ ಭಂಗ' ಎಂದು ಹೇಳಿದ್ದಾರೆ. ಪೊಲೀಸರು 2008ರ ನವೆಂಬರ್ 27ರಂದು ಈ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.
ಈ ಹೇಳಿಕೆಯು ಸಾಕ್ಷಿ ಅಥವಾ ಆರೋಪಪಟ್ಟಿಯಲ್ಲಿ ಇಲ್ಲದ ಕಾರಣ ಇದನ್ನು ದಾಖಲಿಸಿಕೊಳ್ಳಬೇಕು ಎಂದು ಪ್ರಕರಣದ ಡಿಫೆನ್ಸ್ ವಕೀಲ ಅಬ್ಬಾಸ್ ಖಾಜ್ಮಿ ಸಲ್ಲಿಸಿರುವ ಅರ್ಜಿಗೆ ಉತ್ತರಿಸಲು ಪೊಲೀಸರಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.
ಕಸಬ್ ನಾಯರ್ ಆಸ್ಪತ್ರೆಯಲ್ಲಿ ಈ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂಬುದಾಗಿ ಸರ್ಕಾರಿ ವಕೀಲ ಉಜ್ವಲ್ ನಿಖಂ ಹೇಳಿದ್ದಾರೆ. ಇದು ವಿಚಾರಣೆ ಮತ್ತು ತನಿಖೆಯ ಒಂದು ಭಾಗವಾಗಿದ್ದು, ಇದು ನ್ಯಾಯಾಲಯದಲ್ಲಿ ಅಂಗೀಕಾರಕ್ಕೆ ಅರ್ಹ ಅಲ್ಲ ಎಂದು ಅವರು ವಾದಿಸಿದ್ದಾರೆ.
"ತನಿಖೆಯ ವೇಳೆಗೆ ದಾಖಲಿಸಲಾಗಿರುವ ಹೇಳಿಕೆಯು ಪೊಲೀಸ್ ಅಸ್ತಿಯಾಗುತ್ತದೆಯೇ ವಿನಹ ಅದು ವೈಯಕ್ತಿಕ ಸೊತ್ತಲ್ಲ. ಅದು ಪೊಲೀಸರ ವಶದಲ್ಲಿರಬೇಕು. ಅಂತಹ ಸಿಡಿಯು ಒಂದು ಟಿವಿ ವಾಹಿನಿಗೆ ಸೋರಿಕೆಯಾಗುತ್ತದೆ ಎಂದರೆ ಅದು ಗಂಭೀರ ವಿಚಾರ. ಇದು ಕಳ್ಳತನ ಹಾಗೂ ವಿಶ್ವಾಸ ದ್ರೋಹವಾಗುತ್ತದೆ" ಎಂದು ತಹಿಲ್ಯಾನಿ ಹೇಳಿದ್ದಾರೆ.
ಇದೀಗ ನ್ಯಾಯಾಲಯದ ಮುಂದೆ ಮೂರು ಆಯ್ಕೆಗಳಿವೆ. ಒಂದು ನಾವು ಖಾಜ್ಮಿ ಅರ್ಜಿಯನ್ನು ಸ್ವೀಕರಿಸುವುದು. ಅಥವಾ ಸಂಬಂಧಿತ ಟಿವಿ ವಾಹಿನಿ ಮೇಲೆ ನ್ಯಾಯಾಲಯ ನಿಂದನೆ ನೋಟೀಸು ನೀಡುವುದು, ಇಲ್ಲವೇ ಇದನ್ನು ಅಪರಾಧವೆಂದು ಪರಿಗಣಿಸಿ ಸಂಬಂಧಿತ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುವುದು ಎಂದು ಹೇಳಿದ್ದಾರೆ.