ತದ್ರೂಪಿ ತಂತ್ರಜ್ಞಾನದ ಮೂಲಕ ಮಹಾತ್ಮ ಗಾಂಧೀಜಿ ಅವರಿಗೆ ಪುನರ್ಜನ್ಮ ನೀಡಲು ಸಾಧ್ಯವಾದರೆ ಈ ಕುರಿತು ಕಾಯ್ದೆ ಮಾಡಲು ಹಿಂದೇಟು ಹಾಕಬಾರದು ಎಂಬುದಾಗಿ ಕಾಂಗ್ರೆಸ್ ಸಂಸದರೊಬ್ಬರು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿರುವುದು ಈ ಕುರಿತು ಕುತೂಹಲಕಾರಿ ಚರ್ಚೆಗೆ ನಾಂದಿಯಾಯಿತು.
ಪ್ರಶ್ನೋತ್ತರ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಶಾಂತಾರಾಂ ಲಕ್ಷ್ಮಣ ನಾಯಕ್ ಅವರು ಕ್ಲೋನಿಂಗ್ ತಂತ್ರಜ್ಞಾನದ ಮೂಲಕ ಗಾಂಧೀಜಿ ಅವರ ಮರುಸೃಷ್ಟಿ ಸಾಧ್ಯವಾದರೆ ಈ ಕುರಿತ ಕಾಯ್ದೆಗೆ ಹಿಂದೇಟು ಹಾಕಬಾರದು ಎಂದು ಒತ್ತಾಯಿಸಿದರು.
ಗಾಂಧೀಜಿ ಅವರಿಗಿದ್ದ ಪ್ರಾಮಾಣಿಕತೆ, ಬದ್ಧತೆ ಹಾಗೂ ಸರಳತೆಯ ಗುಣಗಳನ್ನು ಒಳಗೊಂಡ ವ್ಯಕ್ತಿಯನ್ನು ಕ್ಲೋನಿಂಗ್ ಮೂಲಕ ಸೃಷ್ಟಿಸಬೇಕು ಎಂಬುದು ನಾಯಕರ ಅಭಿಪ್ರಾಯವಾಗಿದೆ.
ಇದಕ್ಕೆ ಉತ್ತರಿಸಿದ ಆರೋಗ್ಯ ಖಾತೆಯ ರಾಜ್ಯ ಸಚಿವ ದಿನೇಶ್ ತ್ರಿವೇದಿ ಅವರು ನಾವೆಲ್ಲರೂ ಗಾಂಧೀಜಿ ಅವರ ತತ್ವಗಳು ಮತ್ತು ಆದರ್ಶಗಳನ್ನು ಅಳವಡಿಸಿಕೊಂಡರೆ ಇದೇ ಅವರಿಗೆ ಪುನರ್ಜನ್ಮ ನೀಡಿದಂತೆ ಎಂದು ನುಡಿದರು.