ಬಿಜೆಪಿ ಆಡಳಿತದ ಛತ್ತೀಸ್‌ಗಢದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎನ್ಆರ್‌ಜಿಎ)ಯ ಜಾರಿಯ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಸಿಪಿ ಜೋಷಿ ಅವರು ನೀಡಿದ ಹೇಳಿಕೆಯೊಂದು ಉಭಯ ಪಕ್ಷಗಳೊಳಗೆ ಮಾತಿನ ಘರ್ಷಣೆಗೆ ನಾಂದಿಯಾಯಿತಲ್ಲದೆ, ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ಅವರು ಖಾರವಾಗಿ ಪ್ರತಿಕ್ರಿಯಿಸುವಂತೆ ಮಾಡಿತು.
"ಉದ್ಯೋಗ ಖಾತರಿ ಯೋಜನೆಯಡಿ ದಿನವೊಂದರ 75 ರೂಪಾಯಿ ನೀಡಲು ಛತ್ತೀಸ್‌ಗಢ ಸರ್ಕಾರಕ್ಕೆ ಧಮ್ಮಿಲ್ಲ, ಆದರೆ ಅದು ಕೇಂದ್ರದಿಂದ ನೂರು ರೂಪಾಯಿಗೆ ಒತ್ತಾಯಿಸುತ್ತಿದೆ" ಎಂಬುದಾಗಿ ನೀಡಿದ ಸಡಿಲ ಹೇಳಿಕೆಯು ಮಾತಿನ ಚಕಮಕಿಗೆ ಕಾರಣವಾಯಿತು.
ಯೋಜನೆಯಡಿ ನೀಡುತ್ತಿರುವ ಮೊತ್ತವನ್ನು ಪರಿಷ್ಕರಿಸಬೇಕು ಎಂಬ ರಾಜ್ಯದ ವಿನಂತಿಗೆ ಉತ್ತರಿಸುತ್ತಿದ್ದ ಜೋಷಿ ಅವರು ಛತ್ತೀಸ್‌ಗಢ ಸಂಸದ ಸರೋಜ್ ಪಾಂಡೆ ಅವರು ವೇತನ ಹೆಚ್ಚಳ ಕುರಿತು ಸಮಯಮಿತಿ ರೂಪಿಸುವಂತೆ ಒತ್ತಾಯಿಸಿದ ವೇಳೆ ತಾಳ್ಮೆ ಕಳೆದುಕೊಂಡು ಮೇಲಿನ ಹೇಳಿಕೆ ನೀಡಿದರು.
ಇದರಿಂದ ವ್ಯಗ್ರಗೊಂಡ ಆಡ್ವಾಣಿ ಅವರು, ಸಚಿವರು ಎಲ್ಲಾ ರಾಜ್ಯಗಳ ಮೇಲೆ ಗೌರವ ಹೊಂದಿರಬೇಕು ಎಂದು ನುಡಿದರಲ್ಲದೆ, ಅವರು ತನ್ನ ಹೇಳಿಕೆಯನ್ನು ಹಿಂತೆಗೆಯಬೇಕು ಎಂದು ಒತ್ತಾಯಿಸಿದರು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಜೋಷಿ ತಕ್ಷಣವೇ ತಣ್ಣಗಾಗಿ, ಯಾವುದೇ ಸದಸ್ಯರನ್ನು ನೋಯಿಸುವುದು ತನ್ನ ಉದ್ದೇಶವಲ್ಲ "ರಾಜ್ಯಗಳಿಗೆ ನೀಡುವ ಸಾಮರ್ಥ್ಯವಿಲ್ಲ ಎಂದಷ್ಟೆ ಹೇಳುವುದು ತನ್ನ ಇಚ್ಛೆಯಾಗಿತ್ತು" ಎಂದು ತೇಪೆಹಚ್ಚಲು ಯತ್ನಿಸಿದರು.