ಸಂಸತ್ತಿನಲ್ಲಿ ವಿರೋಧ ಪಕ್ಷಗಳು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣರನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಸಾಕಷ್ಟು ಮುಂಚಿತವಾಗಿಯೇ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ, ಕೃಷ್ಣ ಅವರು ಸಂಸತ್ತಿನಲ್ಲಿ ಜಂಟಿ ಹೇಳಿಕೆಯನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳಬಹುದೇ ಎಂಬ ಕುರಿತು ಸಂಶಯವಿತ್ತು.
ಬಹುಶಃ ಅವರ ಅಧಿಕಾರಾವಧಿಯಲ್ಲೇ ಬಹುಮುಖ್ಯವಾಗಿರುವ ವಿದೇಶಾಂಗ ನೀತಿಯನ್ನು ಸಮರ್ಥಿಸಿಕೊಳ್ಳಲು ಸಚಿವರು ಸದನಕ್ಕೆ ತೆರಳುವ ಮುಂಚಿತವಾಗಿ ಸಿಂಗ್ ಹಾಗೂ ಸೋನಿಯಾ ತಮ್ಮ ಎಂದಿನ ಆಪತ್ಬಾಂಧವ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿದ್ದರು. ಬುಧವಾರದ ಡಿನ್ನರ್ ವೇಳೆಯಲ್ಲಿ ವಿಪಕ್ಷಗಳ ದಾಳಿಯನ್ನು ಮೊಂಡಾಗಿಸುವಂತೆ ನುರಿತ ಕಾಂಗ್ರೆಸಿಗ ಮುಖರ್ಜಿ ಅವರನ್ನು ಕೇಳಿಕೊಂಡಿದ್ದರು.
"ಲೋಕಸಭೆಯಲ್ಲಿ ಅಕ್ರಮಣಕಾರಿ ವಿಪಕ್ಷಗಳನ್ನು ಎದುರಿಸುವ ಪ್ರಸಕ್ತ ಸನ್ನಿವೇಶಕ್ಕೆ ಹೆಚ್ಚು ಶಕ್ತಿಯ ಅವಶ್ಯಕತೆ ಇರುವುದು ಸಿಂಗ್ ಹಾಗೂ ಸೋನಿಯಾರಿಗೆ ತಿಳಿದಿತ್ತು" ಎಂಬುದಾಗಿ ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಆರಂಭದಿಂದಲೇ ಕೃಷ್ಣ ಅವರ ಕಾರ್ಯಕ್ಷಮತೆ ದುರ್ಬಲವಾಗಿತ್ತು. ಕಾಬುಲ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಮೇಲಿನ ದಾಳಿಗೆ ಒಂದು ವರ್ಷ ಪೂರೈಸಿದ ವೇಳೆಗೆ ಅವರು ನೀಡಿದ ಹೇಳಿಕೆಯಿಂದಲೇ ಇದು ಆರಂಭವಾಗಿದೆ. ಇವರು ತಮ್ಮ ಹೇಳಿಕೆಯನ್ನು ಓದಲು ಆರಂಭಿಸಿದ್ದರು. ಆದರೆ ದಾಳಿಯಲ್ಲಿ ಸತ್ತವರ ಕುಟುಂಬದ ಕಲ್ಯಾಣದ ಕುರಿತು ಕೇಳಲಾದ ಪ್ರಶ್ನೆಗೆ ಅವರು ಪರದಾಡಿದ್ದು, ಆಗ ವಾಣಿಜ್ಯ ಸಚಿವ ಆನಂದ ಶರ್ಮಾ ಅವರ ಸಹಾಯಕ್ಕೆ ಮುಂದಾಗಿದ್ದರು.
ಅಂತೆಯೇ ಹಿಲರಿ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಒಪ್ಪಂದಗಳಿಗೆ ಸಹಿ ಹಾಕಿರುವ ಕುರಿತು ಸದನದಲ್ಲಿ ಎದುರಾದ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರ ನೀಡಲು ತಡವರಿಸಿದ್ದರು ಎಂದು ಮೂಲಗಳು ಹೇಳಿವೆ.
ಗುರುವಾರ ಜಂಟಿ ಹೇಳಿಕೆ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ಅವರು ಚರ್ಚೆಯನ್ನು ಅಂತ್ಯಗೊಳಿಸದೆ ಲಂಕಾ ತಮಿಳು ನಿರಾಶ್ರಿತರ ವಿಚಾರವನ್ನು ಎತ್ತಿದರು. ಇದರಿಂದ ಅವರನ್ನು ವಿಪಕ್ಷಗಳು "ಈ ಸರ್ಕಾರದ ಶಿವರಾಜ ಪಾಟೀಲ್" ಎಂದು ಟೀಕಿಸಿದ್ದವು.