ಭ್ರಷ್ಟಾಚಾರ ಹಗರಣದಲ್ಲಿ ಪುತ್ರ ಸರೋಬ್ಜಿತ್ ಸಿಂಗ್ ಸಿಬಿಐ ಪೊಲೀಸರ ಬಂಧನಕ್ಕೀಡಾಗಿರುವ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಬೂಟಾ ಸಿಂಗ್ ಅವರನ್ನು ಸಿಬಿಐ ತನಿಖೆಗೊಳಪಡಿಸಲಿದೆ ಎಂಬ ವದಂತಿಗಳು ದಟ್ಟವಾಗುತ್ತಿರುವಂತೆ ತಾನು ತನಿಖೆಗೆ ಸಿದ್ಧ ಎಂಬುದಾಗಿ ಅವರು ಹೇಳಿದ್ದಾರೆ. ಆದರೆ, ಈ ಪ್ರಕರಣ ತನ್ನನ್ನು ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಮುಗಿಸುವ ಸಂಚು ಎಂದು ಹೇಳಿರುವ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.
ಮಾಜಿ ಕೇಂದ್ರ ಸಚಿವರಾಗಿರುವ ಬೂಟಾ ಸಿಂಗ್ ಅವರು ದೆಹಲಿಯಲ್ಲಿ ಪತ್ರಿಕಾಗೊಷ್ಠಿ ನಡೆಸಿದ್ದು, ತಾನು ಸಿಬಿಐ ತನಿಖೆಗೆ ಸಿದ್ಧ ಎಂದು ಹೇಳಿದ್ದಾರೆ.
"ಈ ರಾಜಕೀಯ ಸಂಚಿನ ಕುರಿತು ತಾನು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು. ಪ್ರಕರಣದ ಕುರಿತು ತನ್ನ ಮಕ್ಕಳನ್ನು ಕೆಲವರು ಸಂಪರ್ಕಿಸುತ್ತಿರುವ ವಿಚಾರ ತನ್ನ ಗಮನಕ್ಕೆ ಬರುತ್ತಿರುವಂತೆ ಈ ಕುರಿತು ಪೊಲೀಸ್ ಆಯುಕ್ತರಿಗೆ ದೂರುನೀಡಿದ್ದೆ. ಆದರೆ ಪೊಲೀಸರು ದೂರಿನ ಬಗ್ಗೆ ಕ್ರಮಕೈಗೊಳ್ಳುವ ಬದಲಿಗೆ ನನ್ನ ವಿರುದ್ಧ ಕ್ರಮಕೈಗೊಂಡರು" ಎಂದು ಅವರು ದೂರಿದರು.
ಆಯೋಗದ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ನಡೆಸಲಾಗಿದೆ ಎಂದು ಆಯೋಗವು ಉನ್ನತ ನ್ಯಾಯಾಲಯದಲ್ಲಿ ದೂರು ನೀಡಲಿದೆ. ಅಲ್ಲದೆ ಈ ಕುರಿತು ತಾನು ಪ್ರಧಾನಿಯವರನ್ನು ಭೇಟಿಯಾಗಿ ಪ್ರಕರಣದ ಸತ್ಯಾಂಶಗಳನ್ನು ತಿಳಿಸಲಿದ್ದೇನೆ" ಎಂದವರು ನುಡಿದರು.
ಒಂದು ಕೋಟಿ ಲಂಚ ಸ್ವೀಕಾರದ ಕುರಿತು ತನ್ನ ಪುತ್ರ ಸರೋಬ್ಜಿತ್ ಅಲಿಯಾಸ್ ಸ್ವೀಟ್ ಸಿಂಗ್ ತಪ್ಪೊಪ್ಪಿಗೆಗೆ ಒತ್ತಡ ಕಾರಣ ಎಂದು ಅವರು ಹೇಳಿದ್ದಾರೆ.
ನಾಸಿಕ್ ಮೂಲದ ಗುತ್ತಿಗೆದಾರ ರಾಮರಾವ್ ಪಾಟೀಲ್ ವಿರುದ್ಧ ಪರಿಶಿಷ್ಟಜಾತಿ ಪಂಗಡದ ಆಯೋಗದಲ್ಲಿ ದಾಖಲಾಗಿರುವ ಪ್ರಕರಣವನ್ನು ಇತ್ಯರ್ಥಗೊಳಿಸುವ ಕುರಿತು ತನ್ನ ತಂದೆ ಮಾಹಿತಿ ನೀಡಿರುವುದಾಗಿ ಸರೋಬ್ಜಿತ್ ಸಿಂಗ್ ವಿಚಾರಣೆ ವೇಳೆ ಸಿಬಿಐಗೆ ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಅಕ್ರಮ ಪಿಸ್ತೂಲುಗಳು ಪತ್ತೆ ಇದೇ ವೇಳೆ ಸರೋಬ್ಜಿತ್ ಸಿಂಗ್ ಅಲಿಯಾಸ್ ಸ್ವೀಟಿ ಸಿಂಗ್ ಮನೆಗೆ ಸಿಬಿಐ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ. ಈ ವೇಳೆ ಪರವಾನಗಿ ಇಲ್ಲದ ಮೂರು ರಿವಾಲ್ವರ್‌ಗಳು ಹಾಗೂ 38 ಕಾಡತೂಸುಗಳು ಪತ್ತೆಯಾಗಿದ್ದು, ಸಿಬಿಐ ಇದನ್ನು ವಶಪಡಿಸಿಕೊಂಡಿದೆ.
ರಿವಾಲ್ವರ್ ಗಳನ್ನು ವಶಪಡಿಸಿಕೊಂಡ ಸಿಬಿಐ ಶಸ್ತ್ರಾಸ್ತ್ರ ಕಾಯಿದೆಯಡಿ ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ಸ್ವೀಟಿ ಸಿಂಗ್ ವಿರುದ್ಧ ಕೇಸು ದಾಖಲಿಸಿದೆ. ವಿಚಾರಣೆ ನಿಮಿತ್ತ ದಕ್ಷಿಣ ದೆಹಲಿಯಲ್ಲಿನ ಸರಬ್ ಜೋತ್ ಸಿಂಗ್ ಮನೆಗೆ ಇಂದು ಬೆಳಗ್ಗೆ ಸಿಬಿಐ ದಾಳಿ ಮಾಡಿದೆ.