ಮುಂಬೈ ದಾಳಿಗೆ ಸಂಬಂಧಿಸಿದಂತೆ ಜಮಾತ್ ಉದ್ ದಾವಾ(ಜೆಯುಡಿ)ದ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ತನಿಖೆ ಕೈಗೊಳ್ಳಲು ಸಾಕಷ್ಟು ಪುರಾವೆಗಳಿವೆ ಎಂದು ಭಾರತ ಶನಿವಾರ ಹೇಳಿದೆ. ಅಲ್ಲದೆ, ಪಾಕಿಸ್ತಾನವು ಕಳುಹಿಸಿರುವ ಪ್ರಶ್ನೆಗಳ ಕಂತೆಗಳಿಗೆ ಉತ್ತರವನ್ನು ಅಂತಿಮಗೊಳಿಸಲಾಗಿದೆ ಎಂದೂ ಹೇಳಿದೆ.
ಪಾಕಿಸ್ತಾನವು ಕೇಳಿರುವ ಪ್ರಶ್ನೆಗಳಿಗೆ ಉತ್ತರವನ್ನು ಸಿದ್ಧಪಡಿಸಿರುವ ಗೃಹಸಚಿವಾಲಯ ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅದನ್ನು ಇಲ್ಲಿರುವ ಪಾಕ್ ಹೈ ಕಮಿಷನ್‌ಗೆ ಒಪ್ಪಿಸಲಿದೆ ಎಂದು ಗೃಹ ಸಚಿವ ಪಿ. ಚಿದಂಬರಂ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಾಕಿಸ್ತಾನವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು "ಬಿಟ್ಟ ಸ್ಥಳ ತುಂಬಿರಿ ಎಂಬಂತಹ ಮಾಮೂಲಿ ಪ್ರಶ್ನೆಗಳು" ಎಂದರು.
ಪಾಕಿಸ್ತಾನಕ್ಕೆ ನೀಡಿರುವ ಮೂರು ಮಾಹಿತಿ ಕಡತಗಳಲ್ಲಿ ಮುಂಬೈ ದಾಳಿಯ ಹಿಂದಿನ ಪ್ರಮುಖ ರೂವಾರಿ ಎಂಬುದಾಗಿ ಭಾರತ ಗುರುತಿಸಿರುವ ಲಷ್ಕರೆ-ಇ-ತೋಯ್ಬಾ ಸಂಸ್ಥಾಪಕ ಸಯೀದ್ ವಿರುದ್ಧ ಸಾಕಷ್ಟು ಪುರಾವೆಗಳನ್ನು ಭಾರತ ಒದಗಿಸಿದೆ ಎಂದು ಚಿದಂಬರಂ ಹೇಳಿದ್ದಾರೆ.
ಸಯೀದ್ ವಿರುದ್ಧ ತನಿಖೆ ಮುಂದುವರಿಸಲು ಸಾಕಷ್ಟು ಪುರಾವೆಗಳಿವೆ ಎಂದು ಅವರು ತಿಳಿಸಿದರು.