ನವದೆಹಲಿ: ದೇವಾಲಯಗಳ ಆಡಳಿತವನ್ನು ವಶಕ್ಕೆ ತೆಗೆದುಕೊಳ್ಳಲು ಅಧಿಕಾರ ನೀಡುವ ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಹಾಗೂ ದತ್ತಿ ಕಾಯ್ದೆ- 1997ರ ಸೆಕ್ಷನ್ 25ಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ನೇತೃತ್ವದ ನ್ಯಾಯಪೀಠವು, ದೇವಾಲಯಗಳ ಆಡಳಿತವನ್ನು ವಶಕ್ಕೆ ತೆಗೆದುಕೊಳ್ಳುವ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಕಾಯ್ದೆಯ ಸೆಕ್ಷನ್ 25ನ್ನು ತಡೆ ಹಿಡಿದಿರುವುದಾಗಿ ಹೇಳಿದೆ.
ಹಿರಿಯ ವಕೀಲರಾದ ಕೆ.ಕೆ. ವೇಣುಗೋಪಾಲ್ ಹಾಗೂ ವಕೀಲ ಶರಣ್ ಠಾಕೂರ್ ದೇವಾಲಯಗಳ ಆಡಡಳಿತ ವಹಿಸಿಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ನಿರ್ಬಂಧ ಹಾಕಬೇಕು ಎಂದು ನ್ಯಾಯಾಲಯವನ್ನು ವಿನಂತಿಸಿದರು.
ಸರ್ಕಾರದ ವಕೀಲರಾದ ಸಂಜಯ್ ಹೆಗ್ಡೆ ಅವರು, ಸುಪ್ರೀಂ ಕೋರ್ಟ್ ಈ ಮೊದಲು ಹೈಕೋರ್ಟ್ ತೀರ್ಪಿಗೆ ತಡೆ ನೀಡಿದೆ, ಇದೀಗ ಸೆಕ್ಷನ್ 25 ಅನ್ನು ತಡೆ ಹಿಡಿದಿದೆ ಎಂದು ನ್ಯಾಯಾಲಯದ ಮುಂದೆ ಅರಿಕೆ ಮಾಡಿದರು.
ಸಹಸ್ರಲಿಂಗೇಶ್ವರ ದೇವಾಲಯದ ಆಡಳಿತ ವರ್ಗ ಹಾಗೂ ಮತ್ತಿತರರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಸಕ್ತ ಕಾಯ್ದೆಯನ್ವಯ ಸಮಿತಿಗಳನ್ನು ರಚಿಸಿದರೆ ತೊಂದರೆಗೆ ಸಿಲುಕುವುದಾಗಿ ಪ್ರತಿಪಾದಿಸಲಾಗಿದೆ.
ಈ ಇಡೀ ಕಾಯ್ದೆಯನ್ನು ಈ ಹಿಂದೆ ರಾಜ್ಯ ಹೈಕೋರ್ಟ್ ಸಂವಿಧಾನಬಾಹಿರ ಎಂದು ಸಾರಿದೆಯಲ್ಲದೆ, ಇದನ್ನು ರದ್ದುಗೊಳಿಸಿತ್ತು. ಇದೀಗ ರಾಜ್ಯದ ಹಲವಾರು ದೇವಾಲಯಗಳ ಸುಮಾರು 70 ಸಾವಿರ ಪುರೋಹಿತರು, ದೇವಾಲಯಗಳ ಆಡಳಿತ ಮತ್ತು ಧರ್ಮದರ್ಶಿ ಮಂಡಳಿಗಳ ಭವಿಷ್ಯ ಈ ಅರ್ಜಿಯನ್ನು ಅವಲಂಭಿಸಿದೆ.