ಮುಂಬೈ ದಾಳಿ ಪ್ರಕರಣದಲ್ಲಿ ತನ್ನ ದೇಶದ ಉಗ್ರಗಾಮಿಗಳ ಕೈವಾಡ ಇರುವುದಕ್ಕೆ ಸರಿಯಾದ ಸಾಕ್ಷ್ಯಾಧಾರ ಇಲ್ಲ ಎಂದು ಹೇಳುತ್ತಿದ್ದ ಪಾಕಿಸ್ತಾನಕ್ಕೆ ಭಾರತ ಶನಿವಾರ ಮತ್ತಷ್ಟು ದಾಖಲೆಗಳನ್ನು ಒದಗಿಸಿದೆ.
ಈ ಮುಂಚೆ ಪ್ರಕರಣ ಸಂಬಂಧ ಮೂರು ಬಾರಿ ಸಾಕ್ಷ್ಯಾಧಾರಗಳಿರುವ ದಾಖಲೆಗಳನ್ನು ಪಾಕಿಸ್ತಾನಕ್ಕೆ ನೀಡಿದ ಭಾರತ ಈ ಬಾರಿ ಸವಿವರವಾಗಿರುವ ಇನ್ನಷ್ಟು ದಾಖಲೆಗಳನ್ನು ಹಸ್ತಾಂತರಿಸಿದೆ. ವಿದೇಶಾಂಗ ವ್ಯವಹಾರ ಸಚಿವಾಲಯದಲ್ಲಿರುವ ಜಂಟಿ ಕಾರ್ಯದರ್ಶಿ ಟಿ.ಸಿ.ಎ.ರಾಘವನ್ ಅವರು ಸುಮಾರು 70 ಪುಟಗಳಿರುವ ದಾಖಲೆಯನ್ನು ಪಾಕಿಸ್ತಾನದ ಉಪರಾಯಭಾರಿ ರೀಫಾತ್ ಮಸೂದ್ ಅವರಿಗೆ ನೀಡಿದರು.
ಮುಂಬೈ ದಾಳಿ ಪ್ರಕರಣದಲ್ಲಿ ಭಾರತ ನಡೆಸಿರುವ ತನಿಖೆ ಬಗ್ಗೆ ಸವಿವರವಾದ ಮಾಹಿತಿಗಳು ಈ ದಾಖಲೆಯಲ್ಲಿ ಸೇರಿವೆ. ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಲಷ್ಕರೆ ತೊಯ್ಬಾದ ಕೈವಾಡ ಇರುವುದಕ್ಕೆ ಈ ದಾಖಲೆಯಲ್ಲಿ ಕಾನೂನುಬದ್ದ ಸಾಕ್ಷ್ಯ ಇದೆ ಎನ್ನಲಾಗಿದೆ.
ಪಾಕಿಸ್ತಾನ ಕೇಳಿರುವ ರೀತಿಯಲ್ಲಿ ಎಲ್ಲಾ ಸಾಕ್ಷ್ಯಾಧಾರಗಳನ್ನು ಭಾರತ ಒದಗಿಸಿದಂತಾಗಿದೆ. ಪಾಕಿಸ್ತಾನದಲ್ಲಿ ರಾಜಾರೋಷವಾಗಿ ತಿರುಗಾಡಿಕೊಂಡಿರುವ ಮುಂಬೈ ದಾಳಿಕೋರರ ವಿರುದ್ಧ ಆ ದೇಶ ಕ್ರಮ ಕೈಗೊಳ್ಳಲು ಇಷ್ಟು ಪುರಾವೆ ಸಾಕು ಎಂಬ ಅಭಿಪ್ರಾಯಗಲು ವ್ಯಕ್ತವಾಗಿವೆ.