ಲಂಚ ಸ್ವೀಕಾರ ಪ್ರಕರಣದಲ್ಲಿ ನನ್ನ ಹಾಗೂ ಪುತ್ರನನ್ನು ಬಲಿಪಶುಗಳನ್ನಾಗಿ ಮಾಡಿದೆ. ಇದರ ಹಿಂದೆ ರಾಜಕೀಯ ಪಕ್ಷವೊಂದರ ಕೈವಾಡ ಇದೆ ಎಂಬುದಾಗಿ ಕೇಂದ್ರ ಮಾಜಿ ಸಚಿವ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಬೂಟಾ ಸಿಂಗ್ ಭಾನುವಾರ ಗಂಭೀರವಾಗಿ ಆರೋಪಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷವೊಂದರ ನಿರ್ದೇಶನದ ಮೇರೆಗೆ ಸಿಬಿಐಯೇ ಈ ಸಂಚಿನ ಸೂತ್ರವನ್ನು ಹೆಣೆದಿದೆ. ಅಲ್ಲದೇ ನನ್ನ ವಿರುದ್ಧ ಸಾಕ್ಷ್ಯದ ಸಂಗ್ರಹದ ತೊಡಗಿದೆ. ಆ ನಿಟ್ಟಿನಲ್ಲಿ ಸಿಬಿಐ ರಾಮಾರಾವ್ ಪಾಟೀಲ್ ಮತ್ತು ಅನುಪ್ ಬೇಗಿಯನ್ನು ಬಳಸಿಕೊಂಡಿದೆ ಎಂದು ದೂರಿದರು.
ಲಂಚ ಸ್ವೀಕಾರ ಪ್ರಕರಣದ ಕುರಿತಂತೆ ಸಿಬಿಐ ಕ್ರಮಬದ್ಧವಾಗಿ ತನಿಖೆ ನಡೆಸುವುದಾದರೆ ನಾನು ಸಿದ್ದನಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಬೂಟಾ ಸಿಂಗ್ ಅವರ ಪುತ್ರ ಸರಬ್‌ಜೋತ್ ಸಿಂಗ್ ಅವರು ಮಹಾರಾಷ್ಟ್ರ ಮೂಲದ ಗುತ್ತಿಗೆದಾರ ಪಾಟೀಲ್ ಅವರಿಂದ ಲಂಚಕ್ಕೆ ಒತ್ತಾಯ ಮಾಡಿ ಸಿಬಿಐಗೆ ಸಿಕ್ಕಿಬಿದ್ದಿದ್ದರು. ಸಿವಿಲ್ ಗುತ್ತಿಗೆದಾರ ರಾಮರಾವ್ ಪಾಟೀಲರ ವಿರುದ್ಧ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದಲ್ಲಿ ಪ್ರಕರಣ ದಾಖಲಾಗಿತ್ತು. ಬೂಟಾ ಸಿಂಗ್ ಅವರೇ ಆಯೋಗದ ಅಧ್ಯಕ್ಷರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಬೂಟಾ ಸಿಂಗ್ ಪುತ್ರ ಸ್ವೀಟಿಯು ರಾಮರಾವ್ ಅವರನ್ನು ಮಧ್ಯವರ್ತಿ ಬೇಗಿಯೊಂದಿಗೆ ಸಂಪರ್ಕಿಸಿ, ಪ್ರಕರಣವನ್ನು ಇತ್ಯರ್ಥ ಮಾಡುತ್ತೇನೆಂದೂ, ಅದಕ್ಕಾಗಿ ಮೂರು ಕೋಟಿ ರೂಪಾಯಿ ಕೊಡಬೇಕೆಂದು ಡೀಲ್ ಕುದುರಿಸಲು ಯತ್ನಿಸಿದ್ದರು. ಆನಂತರ ನಡೆದ ಚೌಕಾಸಿಯಲ್ಲಿ ಮೊತ್ತವು ಒಂದು ಕೋಟಿ ರೂಪಾಯಿಗೆ ಇಳಿದಿತ್ತು. ಈ ಸಂದರ್ಭದಲ್ಲಿ ಪಾಟೀಲ್ ಸಿಬಿಐಗೆ ವಿಷಯ ತಿಳಿಸಿ ಬೂಟಾ ಪುತ್ರ ಸ್ವೀಟಿ ಸಿಕ್ಕಿ ಬೀಳುವಂತೆ ತಂತ್ರ ಹೂಡಿದ್ದರು.