ರಾಷ್ಟ್ರೀಯ ಪರಿಶಿಷ್ಟರ ಆಯೋಗದ ಅಧ್ಯಕ್ಷ ಬೂಟಾ ಸಿಂಗ್ ಅವರ ಪುತ್ರ ಸರಬ್‌ಜೋತ್ ಸಿಂಗ್ ಮೇಲಿರುವ ಲಂಚ ಪ್ರಕರಣ ಈಗ ಬೆಂಗಳೂರಿಗೆ ವರ್ಗವಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಸರಬ್‌ಜೋತ್ ಸಿಂಗ್‌ಗೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಹವಾಲಾ ಮೂಲಕ ಹಣ ತಲುಪಿಸಿದ್ದಾನೆ ಎನ್ನುವ ಶಂಕೆ ಬಂದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿರುವ ಸಿಬಿಐ ತಂಡ ಹವಾಲಾ ಜಾಲದ ದುಕ್ ಸಿಂಗ್ ಎಂಬಾತನ ಮನೆಯನ್ನು ಶೋಧಿಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಗೆ ಒಳಗಾದ ದುಕ್ ಸಿಂಗ್ ಹವಾಲಾ ಜಾಲದ ಮೂರನೇ ವ್ಯಕ್ತಿಯಾಗಿದ್ದಾನೆ. ಕೇಂದ್ರ ಮಾಜಿ ಸಚಿವ ಬೂಟಾ ಸಿಂಗ್ ಅವರ ಪುತ್ರ ಭಾಗಿಯಾಗಿರುವ ಒಂದು ಕೋಟಿ ರೂಪಾಯಿ ಲಂಚ ಸ್ವೀಕಾರ ಪ್ರಕರಣದ ಹಿಂದೆ ಹವಾಲಾ ಜಾಲದ ಪಾತ್ರ ಇರುವ ಬಗ್ಗೆ ಸಿಬಿಐನ ಎನ್‌ಪೋರ್ಸ್‌ಮೆಂಟ್ ಡೈರಕ್ಟರೇಟ್ ತನಿಖೆ ನಡೆಸುತ್ತಿದೆ.
ಬೂಟಾ ಸಿಂಗ್ ಪುತ್ರ ಸರಬ್‌ಜೋತ್ ಸಿಂಗ್ ನಾಸಿಕ್ ಮೂಲದ ಗುತ್ತಿಗೆದಾರರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕೋಟಿ ರೂ.ಲಂಚ ಪಡೆದಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಅವರನ್ನು ಬಂಧಿಸಿತ್ತು.