ಪರಸ್ಪರ ಒಪ್ಪಿಗೆಯುಳ್ಳ ಪ್ರಾಪ್ತ ವಯಸ್ಕರ ನಡುವಿನ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಶ್ಲಾಘಿಸಿದ್ದಾರೆ.
ಇಂತಹ ಅತ್ಯಂತ ಸಂಕೀರ್ಣ ವಿಷಯದ ಬಗ್ಗೆ ನೀಡಿರುವ ತೀರ್ಪು ದೇಶದ ನ್ಯಾಯಾಂಗ ವ್ಯವಸ್ಥೆಯ ಚರಿತ್ರೆಯಲ್ಲಿ ದಾಖಲಾರ್ಹ ಮತ್ತು ಉತ್ತಮ ಸಂಶೋಧನೆಯಿಂದ ಒಳಗೊಂಡಿದ್ದು ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದರು.
ಈ ತೀರ್ಪನ್ನು ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದದ್ದೇ ಆದಲ್ಲಿ ಅದನ್ನು ಕಾನೂನಾಗಿ ಪರಿವರ್ತಿಸಲು ಸರ್ಕಾರ ಐಪಿಸಿಯ 377ನೇ ಕಾಯ್ದೆಗೆ ತಿದ್ದುಪಡಿ ತರಲಿದೆ ಎಂದು ಅವರು ಸಿಎನ್‌ಎನ್-ಐಬಿಎನ್‌ನ ಕರಣ್ ಥಾಪರ್ ಅವರು ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಸರ್ಕಾರ ಕೋರಲಿಲ್ಲವೇಕೆ ಎಂಬ ಪ್ರಶ್ನೆಗೆ, ಸ್ವಾತಂತ್ರ್ಯ ಮತ್ತು ಖಾಸಗಿತನಕ್ಕೆ ಸಂಬಂಧಿಸಿದ ಕಾನೂನಿನ ಪ್ರಮುಖ ಪ್ರಶ್ನೆಯನ್ನು ತೀರ್ಪು ಇತ್ಯರ್ಥಪಡಿಸಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ನಿಂದ ಅಂತಿಮ ಆದೇಶ ಹೊರಬೀಳದೆ ತಡೆಯಾಜ್ಞೆಗೆ ಕೋರುವುದು ಕೆಲವೊಮ್ಮೆ ವಿವೇಚನಾರಹಿತ ಕ್ರಮವಾಗುತ್ತದೆ ಎಂದು ಹೇಳಿದರು.
ಸಲಿಂಗಕಾಮಕ್ಕೆ ವಿರುದ್ಧವಾದ ಕಾನೂನು ಹಿಂದೆ ದುರ್ಬಳಕೆಯಾಗಿದೆ. ಅದು ಮುಂದೆಯೂ ಆಗುವ ಸಾಧ್ಯತೆ ಇದೆ. ಯಾವುದೇ ಕಾನೂನು ಶೋಷಣೆ ಅಥವಾ ಕಿರುಕುಳ ನೀಡಲು ಅಧಿಕಾರಿಗಳಿಗೆ ಒಂದು ಅಸ್ತ್ರವಾಗಬಾರದು ಎಂದು ಎಚ್ಚರಿಸಿದರು.