ಸಮಾಜದ ಅವಕಾಶ ವಂಚಿತ ವರ್ಗಗಳ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಅವಕಾಶ ಕಲ್ಪಿಸಲು ಮಹಿಳಾ ಮೀಸಲಾತಿ ಮಸೂದೆಯ ಪ್ರಸಕ್ತ ಕರಡನ್ನು ಮರುವಿಮರ್ಷಿಸಬೇಕು ಎಂದು ಮಸ್ಲಿಂ ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯನ್ನು ಅದರ ಪ್ರಸಕ್ತ ರೂಪದಲ್ಲಿ ಮಂಡನೆಗೆ ಸಂಘಟನೆಗಳ ಪ್ರತಿನಿಧಿಗಳು ವಿರೋಧ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆ ನಡೆಸುವ ಬೆದರಿಕೆ ಹಾಕಿದ್ದಾರೆ.
"ಪ್ರಸಕ್ತ ರೂಪದ ಮಹಿಳಾ ಮೀಸಲಾತಿ ಮಸೂದೆಯು ಸಂಸತ್ತಿನಲ್ಲಿ ಮತ್ತು ರಾಜ್ಯ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ಹೊಂದಿಲ್ಲದ ವರ್ಗವನ್ನು ಮತ್ತಷ್ಟು ಅವಕಾಶ ವಂಚಿತರನ್ನಾಗಿ ಮಾಡುತ್ತದೆ ಎಂದು ಅಖಿಲ ಭಾರತೀಯ ಮಿಲ್ಲಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಲಾಂ ವರದಿಗಾರರಿಗೆ ತಿಳಿಸಿದ್ದಾರೆ.
"ಮೇಲ್ವರ್ಗದವರು ತಮ್ಮ ಹಣಕಾಸು ಮತ್ತು ರಾಜಕೀಯ ಪ್ರಭಾವದಿಂದಾಗಿ ದಲಿತರು ಮತ್ತು ಅಲ್ಪಸಂಖ್ಯಾತರನ್ನು ಅದರಲ್ಲೂ ವಿಶೇಷವಾಗಿ ಮುಸ್ಲಿಮರನ್ನು ಬಳಸಿಕೊಂಡು ಹೆಚ್ಚಿನ ಪ್ರಾತಿನಿಧ್ಯ ಗಳಿಸುತ್ತಾರೆ" ಎಂದು ಅವರು ನುಡಿದರು.
ಮಸೂದೆಯಲ್ಲಿರುವ ಅನುಬಂಧಗಳು ರಾಷ್ಟ್ರದಲ್ಲಿನ ಅಲ್ಪಸಂಖ್ಯಾತರನ್ನು ಮೂಲೆಗೆ ತಳ್ಳುವ ಸಂಚು ಎಂದ ಅವರು "ನಾವು ಪ್ರಜಾಪ್ರಭುತ್ವ ರೀತಿಯಲ್ಲಿ ಮಸೂದೆಯಲ್ಲಿನ ಲೋಪದೋಷಗಳ ವಿರುದ್ಧ ಹೋರಾಡಲಿದ್ದೇವೆ ಮತ್ತು ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ"ಎಂದು ನುಡಿದರು.
ಬಿ.ಆರ್. ಅಂಬೇಡ್ಕರ್ ಸೇವಾದಳವನ್ನು ಪ್ರತಿನಿಧಿಸಿರುವ ಅರ್ಚನಾ ಸಿಂಗ್ ಅವರು "ಕಾನೂನು ನಿರ್ಮಾಣ ಪ್ರಕ್ರಿಯೆಯಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕೆ ಮೀಸಲಾತಿಯೊಳಗೆ ಒಳಮೀಸಲಾತಿ ಅಗತ್ಯ" ಎಂದು ಹೇಳಿದ್ದಾರೆ. ಸೂಕ್ತವಾಗಿ ಪ್ರಾತಿನಿಧ್ಯ ಲಭಿಸದ ಸಮಾಜದ ವರ್ಗಗಳ ಮಹಿಳೆಯರಿಗೆ ಮಸೂದೆಯಲ್ಲಿ ಅವಕಾಶ ಕಲ್ಪಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ.