ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇರಳದ ಈ ಗ್ರಾಮದಲ್ಲಿ ಅವಳಿಗಳೋ ಅವಳಿಗಳು! (Doctors | Kerala village | twins | Kodinji)
 
ಉತ್ತರ ಕೇರಳದ ಕೊಡಿಂಜಿ ಎಂಬ ಗ್ರಾಮಕ್ಕೆ ಭೇಟಿ ನೀಡಿ ಅಲ್ಲೊಂದು ಸುತ್ತು ಹಾಕಿದ ಬಳಿಕ ನೀವು ಗಲಿಬಿಲಿಗೊಳ್ಳುವುದು ಖಚಿತ. ಅಲ್ಲಿ ನೀವು ಒಬ್ಬೊಬ್ಬರನ್ನು ಎರಡೆರಡು ಬಾರಿ ನೋಡುತ್ತೀರಿ. ಯಾಕೆಂದರೆ ಈ ಕುಗ್ರಾಮದಲ್ಲಿ 204ಕ್ಕೂ ಹೆಚ್ಚು ಅವಳಿಜವಳಿ ಜೋಡಿಗಳಿವೆ. ಹಾಗಾಗಿ ಈ ಗ್ರಾಮಕ್ಕೆ 'ಅವಳಿ ಗ್ರಾಮ' ಎಂಬುದು ಅನ್ವರ್ಥ ಹೆಸರು.

ಈ ಗ್ರಾಮದಲ್ಲಿ ವಾಸ್ತವ್ಯದಲ್ಲಿರುವ ಸಮುದಾಯದ ಸುಮಾರು 2000 ಕುಟುಂಬಗಳಲ್ಲಿ ಈ ಪರಿಯ ಅವಳಿ ಜವಳಿಗಳ ಜನನಕ್ಕೆ ಕಾರಣವೇನು ಎಂಬುದೇ ವೈದ್ಯರಿಗೊಂದು ಸೋಜಿಗ. ಇಲ್ಲಿನವರು ಅಪರೂಪದ್ದೇನು ತಿನ್ನುವುದಿಲ್ಲ. ಅಥವಾ ಯಾವುದೇ ರಾಸಾಯನಿಕಕ್ಕೆ ತೆರೆದುಕೊಂಡವರಲ್ಲ, ಇಲ್ಲವೇ ಯಾವುದೇ ಫಲವತ್ತತೆಯ ಔಷಧಿ ತಿನ್ನುವುದಿಲ್ಲ. ಆದರೂ ಇಲ್ಲಿ ಹೆಚ್ಚಾಗಿ ಜನಿಸುವುದು ಏಕಕಾಲಕ್ಕೆ ಎರಡೆರಡು ಮಕ್ಕಳು!

ಈ ಪುಟ್ಟಗ್ರಾಮದಲ್ಲಿನ ಅವಳಿಗಳ ಸರಾಸರಿ ಜಾಗತಿಕವಾಗಿ ಒಟ್ಟು ಅವಳಿಗಳ ಸರಾಸರಿಗಿಂತ ಹೆಚ್ಚು. ಜೀವಂತವಾಗಿ ಜನಿಸುವ ಸಾವಿರ ಮಕ್ಕಳಲ್ಲಿ ಸುಮಾರು 45 ಮಕ್ಕಳು ಅವಳಿಜವಳಿ. ಇದಲ್ಲದೆ ದೂರದ ಪ್ರದೇಶಗಳಿಗೆ ಮದುವೆ ಮಾಡಿಕೊಟ್ಟಿರುವ ಇಲ್ಲಿನ ಮಹಿಳೆಯರೂ ಅವಳಿಗಳಿಗೆ ಜನ್ಮ ನೀಡುತ್ತಾರೆ. ಕೊಡಿಂಜಿಯ ಅವಳಿಗಳು ಮತ್ತು ಸಂಬಂಧಿ ಸಂಘಟನೆಯು ಕೊಡಿಂಜಿ ಗ್ರಾಮದಲ್ಲಿ ಮನೆಮನೆ ತೆರಳಿ ಈ ವರ್ಷದ ಆರಂಭದಿಂದ ನಡೆಸಿದ ಸಮೀಕ್ಷೆಯು ಇಲ್ಲಿ 204 ಅವಳಿಗಳಿರುವುದನ್ನು ಪತ್ತೆ ಮಾಡಿದೆ. ಆದರೆ ಈ ಸಂಖ್ಯೆಯು ಈಗ ಹೆಚ್ಚಿದೆ. ಪ್ರಸಕ್ತ ಗರ್ಭಧರಿಸಿರುವ ಐವರು ಮಹಿಳೆಯರೂ ಅವಳಿ ಮಕ್ಕಳಿಗೆ ಜನ್ಮನೀಡಲಿದ್ದಾರೆ.

ಇಂತಹ ಒಂದು ಕುಗ್ರಾಮದಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕ ಅಥವಾ ಔಷಧಿಗಳ ಸೇವನೆ ಇಲ್ಲದಿದ್ದರೂ ಈ ಪರಿಯಲ್ಲಿ ಅವಳಿಗಳ ಜನನ ಒಂದು ವೈದ್ಯಕೀಯ ವಿಸ್ಮಯ ಎಂದು ಇಲ್ಲಿನ ಅವಳಿ ಜನನದ ಅಪರೂಪದ ವಿಚಾರದ ಅಧ್ಯಯನ ನಡೆಸುತ್ತಿರುವ ವೈದ್ಯ ಕೃಷ್ಣನ್ ಶ್ರೀಬಿಜು ಹೇಳುತ್ತಾರೆ. ಕೊಡಿಂಜಿ ಗ್ರಾಮದ ಪಕ್ಕದ ತಾಲೂಕು ತಿರುರಂಗಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಬಿಜು ಅವರು ಹೇಳುವಂತೆ ಪ್ರತಿ ವರ್ಷ ಜನಿಸುವ ಅವಳಿಗಳ ಸಂಖ್ಯೆ ಏರುತ್ತಲೇ ಹೋಗುತ್ತದೆ. ಕಳೆದ ವರ್ಷ ಇಲ್ಲಿ 15 ಜೋಡಿ ಅವಳಿ ಮಕ್ಕಳು ಜನಿಸಿದ್ದರೆ, ಈ ವರ್ಷ ಈ ಸಂಖ್ಯೆ ಹೆಚ್ಚಲಿದೆ.

65ರ ಹರೆಯದ ಪಾತುಮ್ಮಕುಟ್ಟಿ ಹಾಗೂ ಕುಂಞಪಾತುಟ್ಟಿ ಅವರು ಗ್ರಾಮದಲ್ಲಿ ಬದುಕಿರುವ ಅತ್ಯಂತ ಹಿರಿಯ ಅವಳಿಜವಳಿಗಳು. ಅತ್ಯಂತ ಕಿರಿಯರೆಂದರೆ, ಜೂನ್ 10ರಂದು ಜನಿಸಿರುವ ರಿಫಾ ಆಯೇಶಾ ಹಾಗೂ ರಿತಾ ಆಯೇಶಾ.

ಅವಳಿಗಳನ್ನು ಬೆಳೆಸುವುದು ಸುಲಭದ ಮಾತಲ್ಲ ಎನ್ನುತ್ತಾರೆ ಪಾತುಮ್ಮಾ ಕುಟ್ಟಿ. ಚಿಕ್ಕಂದಿನಲ್ಲಿ ತಮ್ಮ ಕುಟುಂಬ ಎದುರಿಸಿದ್ದ ಹಣಕಾಸು ಸಮಸ್ಯೆಯ ಪರದಾಟವನ್ನು ಅವರು ನೆನಪಿಸಿಕೊಳ್ಳುತ್ತಾರೆ. ಆದರೆ, ತನ್ನ ಅವಳಿ ಸಹೋದರಿ ಎಂಬುದಾಗಿ ಜನರು ತನ್ನನ್ನು ತಪ್ಪಾಗಿ ಗುರುತಿಸುವುದು ಅವರಲ್ಲಿ ನಗೆಯುಕ್ಕಿಸುತ್ತದೆ.

ಶಾಲಾಮಕ್ಕಳು ಹೇಳುವುದೇ ಬೇರೆ. ಇಲ್ಲಿನ ಶಾಲೆಯಲ್ಲಿ ಅವಳಿಗಳು, ತಮ್ಮ ಸಹೋದರ ಅಥವಾ ಸಹೋದರಿ ಮಾಡಿರುವ ತಪ್ಪಿಗೆ ತಾವು ಶಿಕ್ಷೆ ಅನುಭವಿಸುವುದಾಗಿ ಹೇಳುತ್ತಾರೆ.

ಇಲ್ಲಿನ ಈ ಪರಿಯ ಅವಳಿಗಳಿಗೆ ವಾತಾವರಣದಲ್ಲೇ ಏನೋ ಕಾರಣ ಎಂಬುದು ಬಿಜು ಅಭಿಪ್ರಾಯ. ಈ ಗ್ರಾಮವು ಸುತ್ತಮುತ್ತಲ ಗದ್ದೆಗಳಲ್ಲಿ ಶೇಖರವಾಗಿರುವ ನೀರಿನಿಂದ ಆವೃತವಾಗಿದೆ. ಮಳೆಗಾಲದಲ್ಲಿನ ಭಾರೀ ಮಳೆಯಿಂದಾಗಿ ಈ ಪ್ರದೇಶವೇ ಪ್ರತ್ಯೇಕವಾಗಿಬಿಡುತ್ತದೆ.

ವಿಶ್ವಾದ್ಯಂತ ಅವಳಿಗಳ ಜನನಕ್ಕೆ ಮುಖ್ಯ ಕಾರಣ ಔಷಧಿಗಳು. ಫಲವತ್ತತೆಯ ಔಷಧಿ, ಹೆಚ್ಚು ಹಾಲಿನ ಉತ್ಪನ್ನಗಳನ್ನು ಸೇವಿಸಿದರೆ ಅವಳಿಗಳ ಸಾಧ್ಯತೆ ಹೆಚ್ಚು. ಆದರೆ ವಿಶ್ವಾದ್ಯಂತ ಅವಳಿಗೆ ಕಾರಣವಾಗಿರುವ ಯಾವುದೇ ಅಂಶಗಳು ಇಲ್ಲಿ ಪತ್ತೆಯಾಗುವುದಿಲ್ಲ. ಹಾಗಾಗಿ ಈ ವಿಸ್ಮಯಕ್ಕೆ ಯಾವುದೋ ಇತರ ಕಾರಣವಿರಬೇಕು ಎಂಬುದು ಬಿಜು ಅಭಿಪ್ರಾಯ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ